ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಅಗತ್ಯ: ಸಚಿವ ಈಶ್ವರ್ ಖಂಡ್ರೆ
ಬೀದರ್ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ -2026ಕ್ಕೆ ಚಾಲನೆ
ಬೀದರ್: ನಾವೆಲ್ಲ ಮಾನಸಿಕವಾಗಿ ಪ್ರಬುದ್ಧರಾಗಿದ್ದರೆ ಸಾಲದು, ದೈಹಿಕವಾಗಿಯೂ ಬಲಶಾಲಿಗಳಾಗಬೇಕು. ಶಾರೀರಿಕವಾಗಿ ಸದೃಢರಾಗಿರಲು ವ್ಯಾಯಾಮ, ಯೋಗ ಮಾಡುವುದರ ಜೊತೆಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡೆಗೆ ಹೆಚ್ಚಿನ ಮಹತ್ವವಿದೆ. ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುತ್ತಾರೆ ಎಂದು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಕೋಮು ಗಲಭೆಗಳು ನಡೆಯದಂತೆ ನೋಡಿಕೊಳ್ಳುವುದು, ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸುವುದು ಸೇರಿದಂತೆ ಹಲವು ಜವಾಬ್ದಾರಿಗಳು ಪೊಲೀಸರ ಮೇಲಿದೆ. ಸರ್ಕಾರದಲ್ಲಿ ಅನೇಕ ಇಲಾಖೆಗಳಿದ್ದರೂ, ಬಹುತೇಕ ಇಲಾಖೆಗಳ ಸಿಬ್ಬಂದಿಗೆ ಬೆಳಗ್ಗೆ 10ರಿಂದ ಸಂಜೆ 4 ಅಥವಾ 5 ಗಂಟೆಯವರೆಗೆ ಕೆಲಸದ ಅವಧಿ ಇರುತ್ತದೆ. ಆದರೆ, ಪೊಲೀಸರು ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.
ಭಾಲ್ಕಿಯಲ್ಲಿ 18 ಎಕರೆ ಪ್ರದೇಶದಲ್ಲಿ ವಿಶಿಷ್ಟ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ವಿಬಿ-ಜಿ ರಾಮ್‌ಜಿ ಯೋಜನೆಯಡಿ ಎಲ್ಲೆಲ್ಲಿ ನಿವೇಶನ ಲಭ್ಯವಿದೆಯೋ ಅಲ್ಲೆಲ್ಲ ಆಟದ ಮೈದಾನ ನಿರ್ಮಿಸಲು ತೀರ್ಮಾನಿಸಲಾಗಿದೆ. ಒಂದು ವರ್ಷದೊಳಗೆ ಎಲ್ಲ ಕಡೆ ಕ್ರೀಡಾಂಗಣ ನಿರ್ಮಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ಕೆಲಸದ ವಾತಾವರಣದಲ್ಲಿ ಎದುರಾಗುವ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ಕ್ರೀಡೆ ಉತ್ತಮ ಮಾರ್ಗವಾಗಿದೆ. ಹೀಗಾಗಿ, ಇಂದು ವಾರ್ಷಿಕ ಕ್ರೀಡಾಕೂಟದ ಮೂಲಕ ಆರಂಭಿಸಿರುವ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ಮುಂದುವರಿಯಬೇಕು. ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕ್ರಿಕೆಟ್ ವೀಕ್ಷಣೆಗಾಗಿ ಭಾರತದಾದ್ಯಂತ ವಿವಿಧ ಸ್ಥಳಗಳಿಗೆ ಪ್ರಯಾಣಿಸಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ ಬೀದರ್‌ಗೆ ಭೇಟಿ ನೀಡಿದ್ದೇನೆ. ನನ್ನ ಸ್ವಂತ ದೇಶವಾದ ದಕ್ಷಿಣ ಆಫ್ರಿಕಾಕ್ಕಿಂತಲೂ ಹೆಚ್ಚು ಬಾರಿ ಭಾರತವನ್ನು ಸುತ್ತಾಡಿದ್ದೇನೆ. 2015ರಲ್ಲಿ ಜನಿಸಿದ ನನ್ನ ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ರಹೀಂ ಖಾನ್, ಬುಡಾ ಅಧ್ಯಕ್ಷ ವಿನೋದ್ ಅಪ್ಪೆ, ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯದ ಸಂಚಾಲಕ ಕುಶಾಲರಾವ್ ಪಾಟೀಲ್ ಗಾದಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಅಕ್ಕ ಪಡೆಯ ರಾಜ್ಯ ಸಂಯೋಜಕಿ ಶೈನಿ ಪ್ರದೀಪ್ ಗುಂಟಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.