Bhalki | ಶರಣ ಸಾಹಿತ್ಯದ ಸಂಶೋಧನೆಗೆ ರಾಜು ಜುಬರೆಗೆ ಪಿಎಚ್‌ಡಿ ಪದವಿ
ಭಾಲ್ಕಿ: ಹಿರೇಮಠ ಸಂಸ್ಥಾನ ಭಾಲ್ಕಿಯ ಶರಣ ಸಾಹಿತ್ಯದ ಅಭ್ಯಾಸಕ ರಾಜು ಜುಬರೆ ಅವರಿಗೆ ವಚನ ಸಾಹಿತ್ಯದ ಸಂಶೋಧನೆಗಾಗಿ ಕಿತ್ತೂರು ರಾಣಿ ಚೆನ್ನಮ್ಮ ಬೆಳಗಾವಿ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಘೋಷಿಸಿದೆ.
ಮರಾಠಿ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಚಂದ್ರಕಾಂತ್ ವಾಘಮಾರೆ ಅವರ ಮಾರ್ಗದರ್ಶನದಲ್ಲಿ ರಾಜು ಜುಬರೆ ಅವರು ‘ಮರಾಠಿಯಲ್ಲಿನ ಅನುವಾದಿತ ಕನ್ನಡ ವಚನ ಸಾಹಿತ್ಯದಲ್ಲಿನ ಜೀವನಮೌಲ್ಯಗಳು: ಒಂದು ವಿಮರ್ಶಾತ್ಮಕ ಅಧ್ಯಯನ’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿದ್ದಾರೆ. ಪೂರ್ವ ಮೌಖಿಕ ಪರೀಕ್ಷೆಯಲ್ಲಿ ಪುಣೆ ವಿಶ್ವವಿದ್ಯಾಲಯದ ಪ್ರೊ. ಡಾ. ತುಕಾರಾಮ್ ರೋಂಗಟೆ ಅವರು ಬಾಹ್ಯ ಪರೀಕ್ಷಕರಾಗಿ ಭಾಗವಹಿಸಿದ್ದರು.
ಕನ್ನಡ ಮತ್ತು ಮರಾಠಿ ಭಾಷೆಗಳ ಅಭ್ಯಾಸಕರಾಗಿರುವ ರಾಜು ಜುಬರೆ ಅವರ 17 ಸ್ವತಂತ್ರ, 10 ಅನುವಾದಿತ ಹಾಗೂ 10 ಸಂಪಾದಿತ ಗ್ರಂಥಗಳು ಪ್ರಕಟವಾಗಿವೆ. ಮಹಾರಾಷ್ಟ್ರ ಬಸವ ಪರಿಷತ್ತಿನ ಸಂಚಾಲಕರಾಗಿ ಶರಣ ಸಾಹಿತ್ಯದ ಪ್ರಸಾರ ಕಾರ್ಯದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.
ತಮ್ಮ ಸಾಧನೆಯ ಶ್ರೇಯಸ್ಸನ್ನು ಗುರುಗಳು, ತಂದೆ-ತಾಯಿ, ಕುಟುಂಬದವರು ಹಾಗೂ ಮಿತ್ರರಿಗೆ ಅರ್ಪಿಸಿರುವ ಅವರು, ನಾಡೋಜ ಡಾ. ಬಸವಲಿಂಗ ಪಟ್ಟದೇವರು ಮತ್ತು ಗುರುಬಸವ ಪಟ್ಟದೇವರ ಆಶೀರ್ವಾದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜು ಜುಬರೆ ಅವರ ಸಾಧನೆಗೆ ಹಿರೇಮಠ ಸಂಸ್ಥಾನದ ಆಡಳಿತಾಧಿಕಾರಿ ಮೋಹನ್ ರೆಡ್ಡಿ, ಪ್ರಾಚಾರ್ಯ ಬಸವರಾಜ್ ಮೊಳಕಿರೆ, ಶಶಿಧರ್ ಕೋಸಂಬೆ ಸೇರಿದಂತೆ ಗಣ್ಯರು, ಸಾಹಿತಿಗಳು ಹಾಗೂ ಶರಣ ಸಾಹಿತ್ಯದ ಅಭ್ಯಾಸಕರು ಅಭಿನಂದಿಸಿದ್ದಾರೆ.