ಬೀದರ್| ಎಐಸಿಸಿಟಿಯು ಜಿಲ್ಲಾಮಟ್ಟದ ಸಮಾವೇಶ
ಬೀದರ್ : ರಾಜ್ಯದಲ್ಲಿ ಲಕ್ಷಾಂತರ ಕಟ್ಟಡ ಕಾರ್ಮಿಕರು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದರೂ ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಎಐಸಿಸಿಟಿಯು ರಾಜ್ಯಾಧ್ಯಕ್ಷ ಪಿ.ಪಿ. ಅಪ್ಪಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಲ್ ಪೇಟೆಯ ಸಮುದಾಯ ಭವನದಲ್ಲಿ ಕರ್ನಾಟಕ ಪ್ರಗತಿಪರ ಕಟ್ಟಡ ಕಾರ್ಮಿಕ ಸಂಘ (ಎಐಸಿಸಿಟಿಯು) ವತಿಯಿಂದ ರವಿವಾರ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಸಂಗ್ರಹವಾಗುತ್ತಿರುವ ಹಣವನ್ನು ಕಾರ್ಮಿಕರ ಹಿತಕ್ಕಾಗಿ ಸಮರ್ಪಕವಾಗಿ ಬಳಸುವ ಬದಲು, ವಿವಿಧ ರೀತಿಯ ಅವ್ಯವಹಾರ ಮತ್ತು ಭ್ರಷ್ಟಾಚಾರಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರಿಗೆ ಅಗತ್ಯವಾದ ಸಾಮಾಜಿಕ ಭದ್ರತೆ, ಶಿಕ್ಷಣ, ಆರೋಗ್ಯ, ವಸತಿ ಸೇರಿದಂತೆ ವಿವಿಧ ಕಲ್ಯಾಣ ಸೌಲಭ್ಯಗಳನ್ನು ಒದಗಿಸಬೇಕಾದ ಮಂಡಳಿಯು ಕಿಟ್ಗಳನ್ನು ವಿತರಿಸುವುದರ ಮೂಲಕ ಕಾರ್ಮಿಕರ ಮೂಲಭೂತ ಹಕ್ಕುಗಳು ಮತ್ತು ಬೇಡಿಕೆಗಳನ್ನು ಕಡೆಗಣಿಸುತ್ತಿದೆ. ಕಿಟ್ಗಳನ್ನು ನೀಡುವ ಮೂಲಕ ಕಾರ್ಮಿಕರನ್ನು ಅವಲಂಬಿತರನ್ನಾಗಿ ಮಾಡಿ ಗುಲಾಮರಂತೆ ನಡೆಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಣ್ಣ ವಿಟ್ಲ ಅವರು ಮಾತನಾಡಿ, ಕಟ್ಟಡ ಕಾರ್ಮಿಕರು ಎಐಸಿಸಿಟಿಯು ಸಂಘಟನೆಯ ಅಡಿಯಲ್ಲಿ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ಕಲ್ಯಾಣ ಮಂಡಳಿಯಲ್ಲಿನ ಭ್ರಷ್ಟಾಚಾರ ಮತ್ತು ಅವ್ಯವಹಾರಗಳನ್ನು ಪ್ರಶ್ನಿಸಿ, ಕಾರ್ಮಿಕರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಒಗ್ಗಟ್ಟಿನ ಹೋರಾಟ ಅಗತ್ಯವಾಗಿದೆ ಎಂದರು.
ಕಾರ್ಮಿಕರು ಕೇವಲ ತಮ್ಮ ದುಡಿಮೆಯ ಹಕ್ಕುಗಳಿಗಾಗಿ ಮಾತ್ರವಲ್ಲದೆ, ದೇಶದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆಯೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಕಾರ್ಮಿಕ ವರ್ಗ ಸಂಘಟಿತ ಶಕ್ತಿಯಾಗಿ ರೂಪುಗೊಂಡು ದೇಶದ ರಾಜಕೀಯವನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ಅಜೀಜ್ ಜಾಗೀರದಾರ್, ಮುಖಂಡರಾದ ಸಯ್ಯದ್ ಮುಜೀಬ್, ಶ್ರೀನಿವಾಸ್, ಕೌಶಲ್, ಜಾಕಿರ್ ಹುಸೇನ್, ಮಹಮ್ಮದ್ ಅಲ್ತಾಫ್, ಸೈಫ್, ಇಂಜಿಬಂ, ಮೋದಿನ್, ಬಸಪ್ಪ, ಬಾಲಾಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.