ಹುಮನಾಬಾದ್‌ : ಕಬ್ಬಿಗೆ ನ್ಯಾಯಯುತ ಬೆಲೆ, ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ಹುಮನಾಬಾದ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-65 ತಡೆದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಅವರು ಕರ್ನಾಟಕ ಸಂಪೂರ್ಣ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ, ಹುಮನಾಬಾದ್‌ ಪಟ್ಟಣದ ರಾಮ್‌ ಮತ್ತು ರಾಜ್ ಕಾಲೇಜು ಎದುರುಗಡೆ ರಾಷ್ಟ್ರೀಯ ಹೆದ್ದಾರಿ-65 ತಡೆದು ಆಕ್ರೋಶ ಹೊರಹಾಕಲಾಯಿತು.

ರಾಜ್ಯ ನಾಯಕರ ಕರೆ ಮೇರೆಗೆ ಈ ಹೋರಾಟ ಮಾಡಿದ್ದೇವೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಆದರೆ, ಕಬ್ಬಿನ ಬೆಲೆ ಮಾತ್ರ ಹೆಚ್ಚಾಗುತ್ತಿಲ್ಲ. ರೈತರ ಗೋಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೇಳುತ್ತಿಲ್ಲ ಎಂದು ಸಂಘದ ತಾಲೂಕಾಧ್ಯಕ್ಷ ಸತೀಶ್ ನನ್ನೂರೆ ಮತ್ತು ಜಿಲ್ಲಾ ಉಪಾಧ್ಯಕ್ಷ ಸಿದ್ದಣ್ಣ ಭೂಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಡಿವೈಎಸ್ಪಿ ಮಡೋಳಪ್ಪ, ಸಿಪಿಐ ಸಂತೋಷ್‌ ತಟ್ಟೆಪಳ್ಳಿ ಮತ್ತು ಪೊಲೀಸ್ ಸಿಬ್ಬಂದಿ ಧಾವಿಸಿ ಬಂದೋಬಸ್ತ್ ಕೈಗೊಂಡರು. ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಂತರ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿದಾಗ ಅವರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಅವರು ಸರ್ಕಾರಕ್ಕೆ ತಲುಪಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹುಮನಾಬಾದ್‌ ಘಟಕದ ಕಾರ್ಯದರ್ಶಿ ದಿಲೀಪ್ ಕುಲಕರ್ಣಿ, ಜಿಲಾನಿ ಪಟೇಲ್, ರಾಮಣ್ಣ ಜನಕೇರಾ, ರಿಯಾಜ್ ಪಟೇಲ್, ರಾಜಕುಮಾರ್‌ ಒತಗಿ, ಕರಬಸಪ್ಪ ಹಾಗೂ ಈಶ್ವರ್‌ ಕಲಬುರಗಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor