Bidar | ಅರ್ಹ ವೈದ್ಯಕೀಯ ಪದವಿ ಪಡೆಯದೆ ವೈದ್ಯ ವೃತ್ತಿ ನಡೆಸುತ್ತಿದ್ದ ಆರೋಪ : ಕ್ಲಿನಿಕ್ ಮುಟ್ಟುಗೋಲು
ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಜಂಬಗಿ ಗ್ರಾಮದಲ್ಲಿ ಯಾವುದೇ ಅರ್ಹ ವೈದ್ಯಕೀಯ ಪದವಿ ಪಡೆಯದೆ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ರಾಜಶೇಖರ್ ಎಂಬುವವರ ಕ್ಲಿನಿಕ್ ಅನ್ನು ಅಧಿಕಾರಿಗಳು ಮುಟ್ಟುಗೋಲು ಮಾಡಿದ್ದಾರೆ.
ರಾಜಶೇಖರ್ ಅವರು ಯಾವುದೇ ಅರ್ಹ ವೈದ್ಯಕೀಯ ಪದವಿ ಪಡೆಯದೆ ವೈದ್ಯ ವೃತ್ತಿ ನಡೆಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ವೈದ್ಯಾಧಿಕಾರಿಗಳು ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಅವರ ಕ್ಲಿನಿಕ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿದರು. ಈ ವೇಳೆ ಕ್ಲಿನಿಕ್ ಅನ್ನು ಮುಟ್ಟುಗೋಲು ಮಾಡಲಾಗಿದೆ.
ದಾಳಿ ಸಂದರ್ಭದಲ್ಲಿ ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿ ಡಾ. ದಿಲೀಪ್ ಡೋಂಗ್ರೆ, ಔರಾದ್ ತಾಲೂಕು ಆರೋಗ್ಯಾಧಿಕಾರಿ ಡಾ. ಅನಿಲ್ ಕುಮಾರ್, ಕೆಪಿಎಂಇ ವಿಷಯ ನಿರ್ವಾಹಕ ಮಹೇಶ್ವರ್ ರೆಡ್ಡಿ ಹಾಗೂ ಸಿಬ್ಬಂದಿ ಬಲಭೀಮ್ ಉಪಸ್ಥಿತರಿದ್ದರು.