Bidar | ರೇಬೀಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಜಾಗೃತಿ ಅಗತ್ಯ: ಬಸವರಾಜ್ ಭತಮುರ್ಗೆ
ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ರೇಬೀಸ್ ದಿನಾಚರಣೆ
ಬೀದರ್: ರೇಬೀಸ್ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಬಸವರಾಜ್ ಭತಮುರ್ಗೆ ಹೇಳಿದರು.
ನಗರದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆರೋಗ್ಯ ಕೇಂದ್ರ, ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ (ಅಲುಮ್ನಿ ಅಸೋಸಿಯೇಷನ್) ಹಾಗೂ ಹೈದರಾಬಾದ್‌ನ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ 20ನೇ ‘ವಿಶ್ವ ರೇಬೀಸ್ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಹೆಚ್ಚು ಸೂಕ್ತವಾಗಿದೆ. ರೇಬೀಸ್ ರೋಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ರೋಗ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಡೀನ್ ಡಾ. ಎಂ.ಕೆ. ತಾಂಡಲೆ, ಪ್ರಾಣಿಗಳಲ್ಲಿ ರೇಬೀಸ್ ರೋಗವನ್ನು ತಡೆಗಟ್ಟುವುದರ ಮೂಲಕ ಮಾತ್ರ ಮಾನವರಲ್ಲಿ ಈ ರೋಗ ಹರಡುವುದನ್ನು ನಿಯಂತ್ರಿಸಲು ಸಾಧ್ಯ. ಇದಕ್ಕಾಗಿ ಪ್ರತಿಯೊಬ್ಬರ ಸಹಕಾರ ಹಾಗೂ ಒಗ್ಗಟ್ಟಿನ ಕಾರ್ಯ ಅತ್ಯಗತ್ಯ ಎಂದು ತಿಳಿಸಿದರು.
ಎಸ್‌ಆರ್‌ಡಿಡಿಎಲ್ ವಿಭಾಗದ ಮುಖ್ಯಸ್ಥ ಡಾ. ಶಿವರಾಜ್ ಮುರಗ್ ಮಾತನಾಡಿ, ಪ್ರಸಕ್ತ ಸಾಲಿನ ವಿಶ್ವ ರೇಬೀಸ್ ದಿನದ ಘೋಷವಾಕ್ಯ ‘ಒಟ್ಟಾಗಿ ಶ್ರಮಿಸೋಣ, ರೇಬೀಸ್ ಗೆಲ್ಲೋಣ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ಲಸಿಕಾ ಅಭಿಯಾನದಲ್ಲಿ ಒಟ್ಟು 111 ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ 0, 7 ಮತ್ತು 21 ದಿನಗಳ ವೇಳಾಪಟ್ಟಿಯಂತೆ ನೀಡಲಾಗುವ ರೇಬೀಸ್ ನಿರೋಧಕ ಲಸಿಕೆಯ ಮೊದಲ ಡೋಸ್ ಅನ್ನು ಉಚಿತವಾಗಿ ನೀಡಲಾಯಿತು. ಅಲ್ಲದೆ, ಶಿಬಿರದಲ್ಲಿ ಸಾರ್ವಜನಿಕರ 40ಕ್ಕೂ ಹೆಚ್ಚು ಸಾಕುಪ್ರಾಣಿಗಳಿಗೆ ಉಚಿತವಾಗಿ ರೇಬೀಸ್ ನಿರೋಧಕ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯ ವಿಜಯಕುಮಾರ್ ಪಾಟೀಲ್, ಡಾ. ಮಲ್ಲಿನಾಥ್ ಕೆ. ಸಿ., ಡಾ. ಭಗವಂತಪ್ಪ ಬಿ., ಡಾ. ಶೇಷರಾವ್, ಡಾ. ವೆಂಕನಗೌಡ ಟಿ., ಡಾ. ರೂಪಾಲಿ ಹಾಗೂ ವೈದ್ಯಾಧಿಕಾರಿ ಡಾ. ಶಹಮೀರ್ ಫಾತಿಮಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.