×
Ad

ಬೀದರ್‌| ಹುಲಸೂರ್ ತಾಲೂಕಿನಲ್ಲಿ ಬಕ್ರೀದ್ ಹಬ್ಬ ಆಚರಣೆ

Update: 2026-05-29 21:34 IST

ಹುಲಸೂರ್ : ತ್ಯಾಗ, ಬಲಿದಾನ ಮತ್ತು ಸಹೋದರತ್ವದ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲಿಂ ಬಾಂಧವರು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಮಸೀದಿಗಳು ಹಾಗೂ ಈದ್ಗಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದ ಈದ್ಗಾ ಮೈದಾನದಲ್ಲಿ ಬೆಳಗ್ಗಿನಿಂದಲೇ ಮುಸ್ಲಿಂ ಬಾಂಧವರು ತಂಡೋಪತಂಡವಾಗಿ ಆಗಮಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಹೊಸ ಉಡುಪು ಧರಿಸಿ, ರಂಗು–ರಂಗಿನ ಟೋಪಿಗಳನ್ನು ತೊಟ್ಟ ಯುವಕರು, ವೃದ್ಧರು ಮತ್ತು ಮಕ್ಕಳು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಹಬ್ಬದ ಸಂಭ್ರಮ ಹೆಚ್ಚಿಸಿದರು.

ವಿಶೇಷ ಈದ್ ನಮಾಝ್‌ ಬಳಿಕ ಧರ್ಮಗುರುಗಳು ಬಕ್ರೀದ್ ಹಬ್ಬದ ಮಹತ್ವ ಕುರಿತು ಉಪನ್ಯಾಸ ನೀಡಿ, ತ್ಯಾಗ, ದಾನ-ಧರ್ಮ, ಸಹಾನುಭೂತಿ ಹಾಗೂ ಮಾನವೀಯ ಮೌಲ್ಯಗಳೇ ಇಸ್ಲಾಂ ಧರ್ಮದ ಮೂಲ ತತ್ವಗಳಾಗಿವೆ. ಸಮಾಜದಲ್ಲಿ ಎಲ್ಲ ಧರ್ಮದ ಜನರೊಂದಿಗೆ ಪ್ರೀತಿ, ಶಾಂತಿ ಮತ್ತು ಸಹೋದರತ್ವದಿಂದ ಬದುಕುವಂತೆ ಅವರು ಕರೆ ನೀಡಿದರು.

ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿ. ರೈತರು ಹಾಗೂ ವ್ಯಾಪಾರಿಗಳು ಸಮೃದ್ಧರಾಗಲಿ. ಪ್ರಕೃತಿ ವಿಕೋಪಗಳು ದೂರವಾಗಲಿ ಎಂದು ವಿಶೇಷ ಪ್ರಾರ್ಥನೆ ಮಾಡಲಾಯಿತು. ಪ್ರಾರ್ಥನೆ ಬಳಿಕ ಪರಸ್ಪರ ಅಪ್ಪಿಕೊಂಡು ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮೌಲಾನಾ ಅಹ್ಮದ್ ರಜಾ, ಗೌಸೋದ್ದೀನ್ ಬಿರಿವಾಲೆ, ಗ್ರಾಮ ಪಂಚಾಯಿತ್ ಮಾಜಿ ಸದಸ್ಯ ಮನ್ಸೂರ್ ದಾವಲಾಜಿ, ನೌಶಾದ್, ಅಬ್ರಾರ್ ಸೌದಾಗರ್, ಮುಜೈದ್ ಜಂಗಿ, ನಾಸೀರ್ ಅಹ್ಮದ್, ಆಶಿಫ್ ಸಿಲಾರ್, ಮುಜಿಬ್ ದಾವಲಾಜಿ, ಸಯ್ಯದ್ ತಬ್ರೇಜ್, ಗುಲಾಂ ಬಡಾಯಿ, ಇಜಾಜ್ ಜಹಾಂಗೀರ್, ಜಮೀರಲ್ಲಾಖನ್, ಗೌಸ್ ಬರಿವಾಲೆ, ಆಯುಬ್ ಖುರೇಷಿ, ಅಬ್ದುಲ್ ಹಮೀದ್, ತನ್ವೀರ್ ಸೈಯದ್ ಹಾಗೂ ಇಕ್ರಾಮ್ ಠಾಕೂರ್ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News