ಶಾಂತಿಯುತವಾಗಿ ಬಕ್ರೀದ್ ಆಚರಿಸಿ: ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಭಾವನೆಯೊಂದಿಗೆ ಬಕ್ರೀದ್ ಆಚರಿಸಬೇಕು ಎಂದು ಜಿಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬಕ್ರೀದ್ ಹಬ್ಬ ಆಚರಣೆ ನಿಮಿತ್ಯ ಅನಧಿಕೃತ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಾಣಿಕೆಯನ್ನು ತಡೆಗಟ್ಟುವ ಕುರಿತು ಜಿಲ್ಲಾ ಮಟ್ಟದ ಮುಂಜಾಗ್ರತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೇ.28 ರಂದು ಆಚರಿಸಲ್ಪಡುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಾಣಿಕೆಯಲ್ಲದೇ ಒಂಟೆಗಳ ವಧೆ ಮತ್ತು ಸಾಗಾಣಿಕೆಯನ್ನು ಸಹ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾದ್ಯಂತ ಆರು ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಬಕ್ರೀದ್ ಹಬ್ಬದ ದಿನದಂದು ಉಂಟಾಗುವ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು, ನಗರದ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲು ಬೀದರ್ ಮಹಾನಗರ ಪಾಲಿಕೆಯ ಆಯುಕ್ತರಿಗೆ ಅವರು ಸೂಚಿಸಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರನ್ವಯ ಹಸು, ಕರು, ಎತ್ತು ಇವುಗಳನ್ನು ಒಟ್ಟಾರೆ ವಧೆ ಮಾಡುವಂತಿಲ್ಲ. 13 ವರ್ಷಗಳ ಎಮ್ಮೆ, ಕೋಣಗಳನ್ನು ಪಶುವೈದ್ಯಾಧಿಕಾರಿಗಳ ದೃಢೀಕರಣದೊಂದಿಗೆ ಮಾತ್ರ ವಧೆ ಮಾಡಬಹುದಾಗಿದೆ. ತಪ್ಪಿದಲ್ಲಿ ಮೊದಲ ಸಲಕ್ಕೆ 50 ಸಾವಿರ ರೂ. ಯಿಂದ 5 ಲಕ್ಷದ ವರೆಗೆ ದಂಡ ಅಥವಾ 3 ವರ್ಷದಿಂದ 7 ವರ್ಷಗಳ ಜೈಲು ಶಿಕ್ಷೆ ಹಾಗೂ 2ನೇ ಸಲಕ್ಕೆ 1 ಲಕ್ಷ ರೂ. ಯಿಂದ 10 ಲಕ್ಷ ರೂ. ವರೆಗೆ ದಂಡ ಇಲ್ಲವೇ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಜಾನುವಾರು ಸಾಗಾಣಿಕೆ ಮಾಡುವಾಗ ವಾಹನದ ಜೊತೆಗೆ ಜಾನುವಾರುಗಳ ಮಾಲೀಕರ ವಿಳಾಸ, ಎಲ್ಲಿಗೆ ಸಾಗಾಣಿಕೆ ಮಾಡಲಾಗುವುದು ಎಂಬುದರ ವಿವರ ಪಶುವೈದ್ಯರಿಂದ ಪಡೆದ ದೃಢೀಕರಣ ಪ್ರಮಾಣ ಪತ್ರ ಹೊಂದಿರಬೇಕು. ವಾಹನದಲ್ಲಿ 100 ಕೆ.ಜಿ. ಕೆಳಗಿನ ಜಾನುವಾರುಗಳಿಗೆ 1x1.5 ಚ.ಮೀ. ಮತ್ತು 100 ಕೆ.ಜಿ. ಮೇಲಿನ ಜಾನುವಾರುಗಳಿಗೆ 1x2 ಚ.ಮೀ. ಸ್ಥಳಾವಕಾಶ ಒದಗಿಸಿ ಕೊಡಬೇಕು. ಇಲ್ಲವಾದಲ್ಲಿ prevention of Cruelty to animals Act ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಸಭೆಯಲ್ಲಿ ಬೀದರ್ ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.