ಹುಲಸೂರ್ | ಭಾರೀ ಗಾಳಿ-ಮಳೆಗೆ ಹಾರಿದ ಮನೆ ಮೇಲಿನ ತಗಡುಗಳು; ಕಲ್ಲುಗಳು ಬಿದ್ದು ಬಾಲಕಿ ಮೃತ್ಯು
ಹುಲಸೂರ್: ಭಾರಿ ಗಾಳಿ ಮಳೆಗೆ ಮನೆ ಮೇಲಿನ ತಗಡುಗಳು ಹಾರಿ, ಮೇಲಿಂದ ಕಲ್ಲುಗಳು ಬಿದ್ದು ಆರು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಹುಲಸೂರ್ ಪಟ್ಟಣದಲ್ಲಿ ಮಂಗಳವಾರ ಸಾಯಂಕಾಲ ನಡೆದಿದೆ.
ಮಹೇರಾ ಶೇಕ್ (6) ಮೃತಪಟ್ಟ ಬಾಲಕಿ.
ಮಂಗಳವಾರ ಸಾಯಂಕಾಲ ಪಟ್ಟಣದಲ್ಲಿ ಬಾರೀ ಗಾಳಿ ಮಳೆಯಾಗಿದ್ದು, ರಭಸವಾದ ಗಾಳಿಗೆ ಪಟ್ಟಣದಲ್ಲಿನ ಮನೆಯೊಂದರ ಮೇಲಿಂದ ತಗಡುಗಳು ಹಾರಿದ್ದು, ತಗಡುಗಳ ಮೇಲಿದ್ದ ಕಲ್ಲುಗಳು ನೇರವಾಗಿ ಮನೆಯಲ್ಲಿದ್ದವರ ಮೇಲೆ ಬಿದ್ದಿವೆ. ಈ ವೇಳೆ ಬಾಲಕಿ ಮಹೇರಾ ಶೇಕ್ ಮೇಲೂ ಕಲ್ಲು ಬಿದ್ದು ಆಕೆ ಮೃತಪಟ್ಟಿದ್ದಾಳೆ.
ಬಾಲಕಿಯ ತಂದೆ ಇಸ್ಮಾಯಿಲ್ (40), ತಾಯಿ ಯಾಸ್ಮಿನ್ (40) ಹಾಗೂ ಫಯಾಜ್ (9) ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಹುಲಸೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶಿವಾನಂದ್ ಮೇತ್ರೆ ಹಾಗೂ ಹುಲಸೂರ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.