ಬೀದರ್| 19 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಗಾಂಜಾ ವಶ : ಮಹಿಳೆಯ ಬಂಧನ
ಬೀದರ್ : ನಗರದ ಸಂಗಮೇಶ್ವರ್ ಕಾಲೋನಿಯ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ ಒಟ್ಟು 19,23,800 ರೂ. ಬೆಲೆ ಬಾಳುವ ಒಟ್ಟು 38 ಕೆ.ಜಿ 476 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದ್ದು, ಒಬ್ಬ ಆರೋಪಿ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಘಟನೆ ನಡೆದಿದೆ.
ನಗರದ ಸಂಗಮೇಶ್ವರ್ ಕಾಲೋನಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ತನ್ನ ಮನೆಯಲ್ಲಿ ಗಾಂಜಾ ಸಂಗ್ರಹಿಸಿದ್ದ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು.
ದಾಳಿಯ ವೇಳೆ ಮನೆಯನ್ನು ಶೋಧಿಸಿದ್ದಾಗ ಮನೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿ ಸುತ್ತಿಟ್ಟ 12 ಗಾಂಜಾ ಪ್ಯಾಕೆಟ್ ಸಿಕ್ಕಿದ್ದು, ಒಟ್ಟು 19,23,800 ರೂ. ಬೆಲೆ ಬಾಳುವ 38 ಕೆ.ಜಿ 476 ಗ್ರಾಂ ಗಾಂಜಾ ಇರುವುದು ಪತ್ತೆಯಾಗಿದೆ. ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಆ ಮಹಿಳೆಯನ್ನು ವಿಚಾರಿಸಿದಾಗ ಈ ಗಾಂಜಾವು ಜಂಬಗಿ ತಾಂಡಾದ ಒಬ್ಬ ವ್ಯಕ್ತಿಯ ಹತ್ತಿರ ಕಡಿಮೆ ಬೆಲೆಗೆ ಖರಿದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಿರುವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಬಂಧಿತ ಮಹಿಳೆ ಸೇರಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.