ಬೀದರ್: ಅ.4ರಂದು ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆಯಲಿರುವ ‘ಶೋಷಿತ ಮತ್ತು ಅಹಿಂದ ಸಮಾವೇಶ’ದಲ್ಲಿ ಸ್ಥಳೀಯ ಮುಖಂಡರಿಗೆ ಸೂಕ್ತ ಮನ್ನಣೆ ನೀಡದ ಹಾಗೂ ಆಮಂತ್ರಣ ಪತ್ರಿಕೆಯಲ್ಲಿ ಪ್ರಾತಿನಿಧ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ ತಡಪಳ್ಳಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯ ಪ್ರಧಾನ ಕಾರ್ಯದರ್ಶಿಗೆ ಯಾವುದೇ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆಯೋಜಕರೇ ತಮಗೆ ಬೇಕಾದವರನ್ನು ಅತಿಥಿಗಳಾಗಿ ಘೋಷಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮಕ್ಕೆ ಹಿಂದುಳಿದ ಕೋಲಿ ಸಮಾಜದ ಮುಖಂಡರು ಹಾಗೂ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್ ಅವರನ್ನು ಆಹ್ವಾನಿಸಿಲ್ಲ. ಕಾಡುಗೊಲ್ಲ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸೇರಿದಂತೆ ಹಿಂದುಳಿದ ಸಮುದಾಯದ ವಿವಿಧ ನಿಗಮ–ಮಂಡಳಿಗಳ ಅಧ್ಯಕ್ಷರನ್ನೂ ಕಡೆಗಣಿಸಲಾಗಿದೆ. ಇತರ ಪಕ್ಷಗಳಲ್ಲಿರುವ ಶೋಷಿತ ಹಾಗೂ ಹಿಂದುಳಿದ ಮುಖಂಡರಿಗೂ ಆಹ್ವಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವೆಲ್ಲವನ್ನೂ ಗಮನಿಸಿದರೆ ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೋ ಅಥವಾ ಹಿಂದುಳಿದ ವರ್ಗಗಳ ಕಾರ್ಯಕ್ರಮವೋ ಎಂಬ ಗೊಂದಲ ಮೂಡಿದೆ. ಕೆಲವರು ಶೋಷಿತ ಹಾಗೂ ಹಿಂದುಳಿದ ಸಮಾಜದ ಹೆಸರು ಹೇಳಿಕೊಂಡು ವೈಯಕ್ತಿಕ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಸಮಾಜದ ಮುಖಂಡರನ್ನು ತುಳಿಯುವ ಮೂಲಕ ಒಡೆದು ಆಳುವ ಕೆಲಸ ಮಾಡಲಾಗುತ್ತಿದೆ. ಮುಗ್ಧ ಜನರನ್ನು ಕೇವಲ ಬಲಿಪಶು ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹಿಂದುಳಿದ ವರ್ಗದವರಿಗೆ ನಿವೇಶನ ನೀಡುವ ಭರವಸೆ ನೀಡಿ 15 ವರ್ಷ ಕಳೆದರೂ, ಈವರೆಗೆ ಬೀದರ್ ಜಿಲ್ಲೆಯಲ್ಲಿ ನಿವೇಶನ ಹಂಚಿಕೆ ಮಾಡಿಲ್ಲ ಎಂದು ದೂರಿದರು. ಅಹಿಂದ ಹಾಗೂ ಶೋಷಿತ ಸಮಾಜದ ಮುಖಂಡರನ್ನು ದಮನ ಮಾಡುವ ಇಂತಹ ಕೆಲಸಗಳು ಮುಂದುವರಿದರೆ ಒಕ್ಕೂಟದ ವತಿಯಿಂದ ಬೀದರ್ ಜಿಲ್ಲೆಯಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಶಿವಕುಮಾರ್, ಶಿವಾಜಿ, ಪರಮೇಶ್ವರ್ ಹಾಗೂ ಧನರಾಜ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor