ಬೀದರ್: ಜನವರಿ 2027ರಲ್ಲಿ 15 ದಿನಗಳ ಕಾಲ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿಯು ಬೀದರ್‌ನಲ್ಲಿ ನಡೆಯಲಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರ‍್ಯಾಲಿಯನ್ನು ಸುವ್ಯವಸ್ಥಿತವಾಗಿ ನಡೆಸಲು ಎಲ್ಲ ರೀತಿಯ ಸಹಾಯ ಮತ್ತು ಸೌಕರ್ಯಗಳನ್ನು ಒದಗಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 12 ಸಾವಿರ ಅಭ್ಯರ್ಥಿಗಳು ಸೇನಾ ಭರ್ತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನೆಹರು ಕ್ರೀಡಾಂಗಣದಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸಂಚಾರ, ಅಗತ್ಯ ವೈದ್ಯಕೀಯ ತಂಡ, ಅಂಬುಲೆನ್ಸ್, ಕುಡಿಯುವ ನೀರು, ಬ್ಯಾರಿಕೇಡ್, ಭದ್ರತೆ, ಇಂಟರ್‌ನೆಟ್, ವಿದ್ಯುತ್, ಶಾಮಿಯಾನ, ಟೆಂಟ್, ಅಗ್ನಿಶಾಮಕ ವಾಹನ ಹಾಗೂ ಪೊಲೀಸ್ ಬಂದೋಬಸ್ತ್ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಜವಾಬ್ದಾರಿಯಿಂದ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗಾವಿಯ ಡೈರೆಕ್ಟರ್ ಆರ್ಮಿ ರಿಕ್ರೂಟಿಂಗ್ ಕಚೇರಿಯ ಕರ್ನಲ್ ಜಸವೀರಸಿಂಗ್ ಎಸ್.ಎಂ. ಮಾತನಾಡಿ, ಪ್ರತಿದಿನ 800ರಿಂದ 1,000 ಅಭ್ಯರ್ಥಿಗಳು ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಲಿದ್ದಾರೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಗಳ ಸುಮಾರು 12,100 ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಸೇನಾ ಭರ್ತಿ ರ‍್ಯಾಲಿಯನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ನೆಹರು ಕ್ರೀಡಾಂಗಣವನ್ನು ಸ್ವಚ್ಛಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಡಿವೈಎಸ್ಪಿ ದಾದಾಪೀರ್ ಮುಲ್ಲಾ, ಸೇನಾ ಭರ್ತಿ ಕಚೇರಿಯ ಹವಾಲ್ದಾರ್ ಧೀರಜ್ ಭಂಡಾರಿ, ಸುಭೇದಾರ್ ಮೇಜರ್ ಮನೋಜ್ ಕುಮಾರ್ ಶರ್ಮಾ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಜಕುಮಾರ್ ಲದ್ದೆ ಹಾಗೂ ಲೋಕೋಪಯೋಗಿ ಇಲಾಖೆಯ ಇಇ ಕಾಮಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor