ಬೀದರ್: ಶ್ರೀಮಂತ ಸಂಸ್ಕೃತಿ ಹಾಗೂ ಐತಿಹಾಸಿಕ ಪರಂಪರೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಪ್ರವಾಸಿ ತಾಣಗಳ ಪರಿಸರ ನೈರ್ಮಲ್ಯವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

ನಗರದ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೀದರ್ ಜಿಲ್ಲೆಯು ಪ್ರವಾಸೋದ್ಯಮದ ಎಲ್ಲ ವೈವಿಧ್ಯಮಯ ವಿಭಾಗಗಳನ್ನು ತನ್ನಲ್ಲಿ ಒಳಗೊಂಡಿದ್ದು, ವಿಶ್ವಮಟ್ಟದಲ್ಲಿ ಪ್ರದರ್ಶಿಸಲು ಹೆಮ್ಮೆಪಡುವಂತಹ ಸುಂದರ ತಾಣವಾಗಿದೆ ಎಂದರು.

ಜಿಲ್ಲೆಯ ಧಾರ್ಮಿಕ ಪ್ರವಾಸೋದ್ಯಮದ ಕುರಿತು ಉಲ್ಲೇಖಿಸಿದ ಅವರು, ಝರಣಿ ನರಸಿಂಹ ಸ್ವಾಮಿ ದೇವಾಲಯ, ಪ್ರಸಿದ್ಧ ಗುರುದ್ವಾರ, ಪಾಪನಾಶ ದೇವಾಲಯ ಹಾಗೂ ಬಸವಕಲ್ಯಾಣದ ಅನುಭವ ಮಂಟಪಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಎಲ್ಲ ವರ್ಗ ಹಾಗೂ ಧರ್ಮಗಳ ಜನರನ್ನು ಆಕರ್ಷಿಸುತ್ತವೆ ಎಂದು ಹೇಳಿದರು.

ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಎಸ್. ಸೊರಗನ್ವಿ ಮಾತನಾಡಿ, ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ತಾಣಗಳ ಸೌಂದರ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯಲು ಮತ್ತು ಅವುಗಳ ರಕ್ಷಣೆಗೆ ಕೃತಕ ಬುದ್ಧಿಮತ್ತೆಯಂತಹ (ಎಐ) ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಯುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕರೆ ನೀಡಿದರು.

ಪ್ರಸ್ತುತ ವಾಯು ಮಾಲಿನ್ಯ, ಪ್ರವಾಹ ಹಾಗೂ ವಾತಾವರಣದ ವೈಪರೀತ್ಯಗಳಿಂದಾಗಿ ಐತಿಹಾಸಿಕ ಸ್ಮಾರಕಗಳು ಹಾನಿಗೊಳಗಾಗುತ್ತಿವೆ. ಇವುಗಳನ್ನು ಸಂರಕ್ಷಿಸಲು ವಿದ್ಯಾರ್ಥಿಗಳು ಹಾಗೂ ನಾಗರಿಕರು ಜಂಟಿಯಾಗಿ ಶ್ರಮಿಸಬೇಕು. ಗಾಳಿ, ನೀರು ಮತ್ತು ಮಣ್ಣು ಎಲ್ಲರಿಗೂ ಸೇರಿದ್ದು, ಅವುಗಳನ್ನು ಮಿತವಾಗಿ ಬಳಸಿ ಪರಿಸರವನ್ನು ಸ್ವಚ್ಛವಾಗಿಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಬೀದರ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೊಸ ಮೊಬೈಲ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಹಾಗೂ ವಿದ್ಯಾರ್ಥಿಗಳು ರೂಪಿಸಿದ ಅತ್ಯುತ್ತಮ ತಾಂತ್ರಿಕ ಯೋಜನಾ ಮಾದರಿಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡುವ ಯೋಜನೆ ಇದೆ ಎಂದು ಅವರು ತಿಳಿಸಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬೀದರ್ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಡೆಂಗಿ, ಬೆಳಗಾವಿ ವಿಟಿಯು ಇ.ಸಿ ಸದಸ್ಯ ಡಾ. ಪವಿತ್ ಸಿಂಗ್, ಜಿಎನ್‌ಡಿ ಇ.ಸಿ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ಕರ್ನಲ್ ರವಿದೀಪ್ ಸಿಂಗ್ ಸೇರಿದಂತೆ ʻಪ್ರವಾಸಿ ಮಿತ್ರ' ಹಾಗೂ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor