ಬೀದರ್: ನಿಸರ್ಗದಿಂದ ಉಚಿತವಾಗಿ ದೊರೆಯಬೇಕಾದ ನೀರು ಮುಂದಿನ ದಿನಗಳಲ್ಲಿ ಹಾಲಿಗಿಂತಲೂ ದುಬಾರಿ ಬೆಲೆಗೆ ಸಿಗುವ ಕಾಲ ದೂರವಿಲ್ಲ. ನೀರಿನ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಆದ್ಯತೆ ನೀಡದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಆತಂಕ ವ್ಯಕ್ತಪಡಿಸಿದರು.

ನಗರದ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ಸಿದ್ದಾರ್ಥ ಪದವಿ ಪೂರ್ವ ಕಾಲೇಜು, ಟೀಂ ಯುವಾ ಹಾಗೂ ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ನೀರು, ಬರ ಮತ್ತು ಪರಿಸರ: ನೆಲದಾಳದಲ್ಲಿ ಹರಿಯುವ ಇತಿಹಾಸ ಬೀದರಿನ ಕರೇಜ್, ನೀರಿನ ಭವಿಷ್ಯಕ್ಕೆ ಭೂತಕಾಲದ ಪಾಠ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸುಮಾರು 30 ವರ್ಷಗಳ ಹಿಂದೆ ನೀರಿಗಾಗಿ ಕುಟುಂಬದ ಸದಸ್ಯರು 3ರಿಂದ 4 ಕಿ.ಮೀ. ನಡೆದು ನೀರು ತರುವ ಪರಿಸ್ಥಿತಿ ಇತ್ತು. ನಂತರ ಬಾವಿ ಹಾಗೂ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಾದ ಪರಿಣಾಮ ಮನೆ ಮನೆಗೂ ನೀರು ಲಭ್ಯವಾಗುತ್ತಿದೆ. ಆದರೆ, ಅಂತರ್ಜಲದ ಅತಿಯಾದ ಬಳಕೆ ಹಾಗೂ ಪರಿಸರ ನಾಶದಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠಲದಾಸ್ ಪ್ಯಾಗೆ ಮಾತನಾಡಿ, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಬರಗಾಲ ತಡೆಯಲು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಬೇಕು. ಕನಿಷ್ಠ ಮನೆಗೊಂದು ಮರ ನೆಟ್ಟು, ನೀರನ್ನು ಮಿತವಾಗಿ ಬಳಸುವ ಮೂಲಕ ನಿಸರ್ಗದ ಮೇಲಿನ ಒತ್ತಡ ಕಡಿಮೆ ಮಾಡುವ ಸಂಕಲ್ಪ ಮಾಡಬೇಕು ಎಂದರು.

ಟೀಂ ಯುವಾ ಸಹ ಸಂಸ್ಥಾಪಕ ವಿನಯ್ ಮಾಳಗೆ ಮಾತನಾಡಿ, ಬೀದರ್ ನಗರ ಹಾಗೂ ಸುತ್ತಮುತ್ತಲಿನ ನಾಲ್ಕೈದು ಕರೇಜ್‌ಗಳು ಪ್ರತಿದಿನ ಅಪಾರ ಪ್ರಮಾಣದ ನೀರನ್ನು ನೆಲದಾಳದಲ್ಲಿ ಹರಿಸುತ್ತಿವೆ. ತೀವ್ರ ಬರದ ಸಂದರ್ಭದಲ್ಲಿಯೂ ಕೆಲವು ಕರೇಜ್‌ಗಳಲ್ಲಿ ನೀರು ಹರಿಯುತ್ತಿರುವುದು ಈ ಪಾರಂಪರಿಕ ವ್ಯವಸ್ಥೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಗುಡ್ಡಗಳನ್ನು ಕಡಿದು ನೀರಿನ ನೈಸರ್ಗಿಕ ಹರಿವಿನ ದಿಕ್ಕನ್ನು ಬದಲಿಸುವುದರಿಂದ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಾರ್ಥ ಕಾಲೇಜಿನ ಪ್ರಾಂಶುಪಾಲ ಏಕನಾಥ್ ಸುಣಗಾರ್ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಚಾಲಕ ಮಹೇಶ್ ಗೋರನಾಳಕರ್ ಮಾತನಾಡಿದರು. ಕರ್ನಾಟಕ ಪಶುವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಸಹಾಯಕ ರಿಜಿಸ್ಟ್ರಾರ್ ಕಂಟೇಪ್ಪಾ ಪೂಜಾರಿ ಪರಿಸರ ಗೀತೆ ಹಾಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಜಗದೀಶ್ವರ್‌ ಬಿರಾದಾರ್‌, ಕಾಲೇಜಿನ ಸಿಬ್ಬಂದಿ ವಿಜಯಕುಮಾರ್‌, ಕೃಷಿ ವಿಜ್ಞಾನಿ ಡಾ. ಮಲ್ಲಿಕಾರ್ಜುನ್‌ ನಿಂಗದಳಿ, ಬುದ್ಧ ಬೆಳಕು ಟ್ರಸ್ಟ್ ಕಾರ್ಯದರ್ಶಿ ಕಲ್ಪನಾ ಗೋರನಾಳಕರ್, ಟೀಂ ಯುವಾ ಸದಸ್ಯರಾದ ಶ್ರೀಧರ್‌ ಸೋಮನೋರ್‌, ಹರ್ಷವರ್ಧನ್‌ ರಾಠೋಡ್‌, ವಿಶಾಲ್‌ ಪಾಟೀಲ್‌, ಬಾಲಾಜಿ ಕುಂಬಾರ್‌ ಹಾಗೂ ಅಮರ್‌ ಅಲ್ಲಾಪೂರ್‌ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor