Bidar | ಪರಿಸರದ ಬಗ್ಗೆ ಕಾಳಜಿ, ಮಾಲಿನ್ಯದ ಬಗ್ಗೆ ಜಾಗೃತಿ ಅಗತ್ಯ: ಡಾ.ಜಗನ್ನಾಥ್ ಹೆಬ್ಬಾಳೆ
ಯೋಗ ಸಾಧಕರಿಂದ ವಿಶ್ವ ಪರಿಸರ ದಿನಾಚರಣೆ
ಬೀದರ್: ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜಗನ್ನಾಥ್ ಹೆಬ್ಬಾಳೆ ಹೇಳಿದರು.
ನಗರದ ಬರೀದ್ ಶಾಹಿ ಉದ್ಯಾನವನದಲ್ಲಿ ಹಿರಿಯ ಯೋಗ ಸಾಧಕರ ತಂಡದ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸ್ವಚ್ಛತಾ ಸಂಸ್ಕೃತಿಯನ್ನು ಬೆಳೆಸಬಹುದು. ರಸ್ತೆಗಳಲ್ಲಿ ಕಸ ಎಸೆಯದೇ ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ್ ಮಾತನಾಡಿ, ಪರಿಸರ ಜಾಗೃತಿ ಮತ್ತು ಮಾಲಿನ್ಯ ನಿಯಂತ್ರಣದ ಕಾರ್ಯಗಳು ಮನೆಯಲ್ಲೇ ಆರಂಭವಾಗಬೇಕು. ಸರ್ಕಾರದ ಹಸಿರೀಕರಣ ಮತ್ತು ಸ್ವಚ್ಛತಾ ಯೋಜನೆಗಳು ಜನರ ಸಹಕಾರದಿಂದ ಮಾತ್ರ ಯಶಸ್ವಿಯಾಗುತ್ತವೆ. ಮಳೆಗಾಲದ ಸಸ್ಯಾರೋಪಣ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಂಕರ್ ಕೆ. ಮಾತನಾಡಿ, ಕಾಲೇಜಿನಲ್ಲಿ ಹಸಿರೀಕರಣಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಇತ್ತೀಚೆಗೆ ವಿದ್ಯಾರ್ಥಿಗಳಿಗೆ 300 ಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ರಾಜಕುಮಾರ್ ಅಲ್ಲುರೆ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಕಾಲೇಜು ಆವರಣವನ್ನು ಇನ್ನಷ್ಟು ಹಸಿರೀಕರಿಸಲು ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಯೋಗ ಮೇಲ್ವಿಚಾರಕ ಗಂಗಪ್ಪ ಸಾವಳೆ, ಜ್ಞಾನೇಶ್ ಪಾಟೀಲ್, ರಮೇಶ್ ಕಪ್ಲಾಪುರ್, ಶಿವರಾಜ್ ಬಿರಾದಾರ್, ಶಂಕರ್ ಚಿದ್ರಿ, ಈಶ್ವರ್ ಕನ್ನೇರಿ, ರಾಚಯ್ಯ ಸ್ವಾಮಿ, ಪುಷ್ಪವತಿ, ಅರುಣಾ ಪಾಟೀಲ್, ನೀಲಮ್ಮ ರೋಗನ್ ಸೇರಿದಂತೆ ಉದ್ಯಾನದ ಅನೇಕ ಯೋಗ ಸಾಧಕರು ಹಾಗೂ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು. ಸಂಜು ಶೀಲವಂತ ಸ್ವಾಗತಿಸಿದರು. ಅಶೋಕ್ ಶೀಲವಂತ್ ನಿರೂಪಿಸಿದರು. ಮಲ್ಲಿಕಾರ್ಜುನ್ ಪಾಟೀಲ್ ಸ್ವಾಗತಿಸಿದರು. ನಿವೃತ್ತ ಮುಖ್ಯಗುರು ನಿಜಲಿಂಗಪ್ಪ ತಗಾರೆಯವರು ವಂದಿಸಿದರು.