Bidar | ಮನೆ-ಮನೆಗೆ ತೆರಳಿ ಎಸ್‌ಐಆರ್ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಜಿಲ್ಲೆಯಲ್ಲಿ 1.77 ಲಕ್ಷಕ್ಕೂ ಅಧಿಕ ಎನುಮರೇಷನ್ ಅರ್ಜಿ ವಿತರಣೆ
ಬೀದರ್: ಜಿಲ್ಲಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶರ್ಮಾ ಅವರು ಗುರುವಾರ ಹುಮನಾಬಾದ್ ಮತ್ತು ಬಸವಕಲ್ಯಾಣ ತಾಲೂಕುಗಳಲ್ಲಿ ಪರಿಶೀಲಿಸಿದರು.
ಹುಮನಾಬಾದ್ ತಾಲೂಕಿನ ಮಾಣಿಕನಗರ ಹಾಗೂ ರಾಜೇಶ್ವರ್ ಗ್ರಾಮಗಳು, ಬಸವಕಲ್ಯಾಣ ತಾಲೂಕಿನ ತ್ರಿಪುರಾಂತದ ಭೀಮನಗರ್, ಅರಿವಿನ ಮನೆ ಮತ್ತು ಸಸ್ತಾಪುರ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಮನೆ-ಮನೆಗೆ ತೆರಳಿ ಸಾರ್ವಜನಿಕರಿಗೆ ಎನುಮರೇಷನ್ ಅರ್ಜಿ ನಮೂನೆಗಳನ್ನು ವಿತರಿಸುವ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಪರಿಷ್ಕರಣೆ ಕಾರ್ಯವನ್ನು ಯಾವುದೇ ಲೋಪದೋಷಗಳಿಲ್ಲದೆ ನಿಖರವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಜೂನ್ 2ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1,77,548 ಎನುಮರೇಷನ್ ಅರ್ಜಿ ನಮೂನೆಗಳನ್ನು ವಿತರಿಸಲಾಗಿದ್ದು, ಸ್ವೀಕೃತವಾದ ಅರ್ಜಿಗಳ ಪೈಕಿ 6,854 ನಮೂನೆಗಳ ಡೇಟಾ ಎಂಟ್ರಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಜುಲೈ 29ರವರೆಗೆ ಮನೆ-ಮನೆಗೆ ಭೇಟಿ ನೀಡಿ ಎನುಮರೇಷನ್ ಅರ್ಜಿಗಳನ್ನು ವಿತರಿಸಲಿದ್ದಾರೆ. ಸಾರ್ವಜನಿಕರು ತಪ್ಪು ಮಾಹಿತಿಗೆ ಅವಕಾಶ ನೀಡದೆ, ಅಗತ್ಯ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಶಿಲ್ಪಾ ಶರ್ಮಾ ಮನವಿ ಮಾಡಿದರು.