ಹುಲಸೂರು | ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ : ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹ
ಹುಲಸೂರು: ವಿಶ್ವಗುರು ಬಸವಣ್ಣನವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ರವಿ ಹಂಜ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನುಬದ್ಧವಾಗಿ ಸಾಧ್ಯವಿದ್ದಲ್ಲಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ, ಬಸವಪರ ಸಂಘಟನೆಗಳು ಹಾಗೂ ಬಸವತತ್ವದ ಅನುಯಾಯಿಗಳು ಮನವಿ ಸಲ್ಲಿಸಿದರು.
ಹುಲಸೂರು ತಹಸೀಲ್ದಾರರ ಮೂಲಕ ಬುಧವಾರ ಗೃಹ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ, 2018ರ ನವೆಂಬರ್ 13ರಂದು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ರವಿ ಹಂಜ್ ಅವರು ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡ ವಿಡಿಯೋ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಲಾಗಿದೆ.
12ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ರಾಂತಿಯ ಮೂಲಕ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಸಾರಿದ ಬಸವಣ್ಣನವರ ಕುರಿತು ವಿಡಿಯೋದಲ್ಲಿ ಮಾಡಿರುವ ಹೇಳಿಕೆಗಳು ಬಸವತತ್ವದ ಅನುಯಾಯಿಗಳು ಹಾಗೂ ನಾಡಿನ ಅನೇಕ ಜನರ ಭಾವನೆಗಳಿಗೆ ನೋವುಂಟು ಮಾಡಿವೆ. ಅಲ್ಲದೆ, ಬಸವಣ್ಣನವರ ವ್ಯಕ್ತಿತ್ವ ಮತ್ತು ಚಾರಿತ್ರ್ಯದ ಕುರಿತು ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
‘ಬಸವ ಮಂಟಪದ ಕುರಿತು ಮಾತುಗಳು’ ಎಂಬ ಶೀರ್ಷಿಕೆಯಲ್ಲಿ ಫೇಸ್ಬುಕ್ನಲ್ಲಿ ಪ್ರಕಟಿಸಿರುವ ವಿಡಿಯೋವನ್ನು ಈಗಾಗಲೇ ಸಾವಿರಾರು ಜನ ವೀಕ್ಷಿಸಿದ್ದು, ಹಂಚಿಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ಹಾಗೂ ಯೂಟ್ಯೂಬ್ನಲ್ಲಿಯೂ ವಿಡಿಯೋ ಪ್ರಸಾರವಾಗಿದೆ. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಗೌರವಿಸಿರುವ ಹಿನ್ನೆಲೆಯಲ್ಲಿ ಅವರ ವಚನ ಸಾಹಿತ್ಯ ಹಾಗೂ ಸಮಾನತೆಯ ಸಂದೇಶಗಳ ಗೌರವ ಕಾಪಾಡುವುದು ಅಗತ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಡಿಯೋದಲ್ಲಿನ ಹೇಳಿಕೆಗಳು ಕಾನೂನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಕಾನೂನಿನಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ವಿಡಿಯೋಗಳ ಕುರಿತು ಸಮಗ್ರ ತನಿಖೆ ನಡೆಸಿ, ಅಗತ್ಯವಿದ್ದಲ್ಲಿ ಅವುಗಳ ಪ್ರಸಾರ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಬಸವಣ್ಣನವರು ಹಾಗೂ ಶರಣರ ಕುರಿತು ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗದಂತೆ ಜವಾಬ್ದಾರಿಯುತ ನಡೆ ಅನುಸರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಕಾಡಾದಿ, ಶಿವರಾಜ್ ಖಪಲೆ, ಸುನಿಲ್ ಕಾಡಾದಿ, ಸಚಿನ್ ಕವಟೇ, ಬಸವರಾಜ್ ಹಾರಕೂಡೆ, ಲವಿತ್ ಧರ್ಮಣ್ಣೆ, ಸಚಿನ್ ವಗ್ಗೆ, ಬಸವರಾಜ್ ಚೌರೆ, ಶಿವಕುಮಾರ್ ಪಾಂಚಾಳ್, ಬಸವರಾಜ್ ರಗಟೆ, ಚಂದ್ರಶೇಖರ್ ಮಂಗಾ, ಆನಂದ್ ಗೋಗೆ, ಗುರುನಾಥ್ ಕೊಡಂಬಲೆ ಹಾಗೂ ಸಂದೀಪ್ ಬಿರಾದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.