×
Ad

Bidar | ಅಕ್ರಮ ನೇಮಕಾತಿ ಆರೋಪ: ಸಿಂಧನಕೇರಾ ಪ್ರಭಾರ ಪಿಡಿಓ ರಘುನಾಥ್ ಅಮಾನತು

Update: 2026-06-17 19:21 IST

ಬೀದರ್: ಹುಮನಾಬಾದ್ ತಾಲೂಕಿನ ಸಿಂಧನಕೇರಾ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಓ ರಘುನಾಥ್ ಅವರನ್ನು ಅಕ್ರಮ ಸಿಬ್ಬಂದಿ ನೇಮಕಾತಿ ಹಾಗೂ ದಾಖಲೆ ತಿದ್ದುಪಡಿ ಆರೋಪಗಳ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಬಹುಜನ ಯುವ ಪ್ಯಾಂಥರ್ ಸಂಘಟನೆಯ ಜಿಲ್ಲಾಧ್ಯಕ್ಷ ಪುಟ್ಟರಾಜ್ ದೀನೆ ಅವರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅಮಾನತು ಆದೇಶ ಹೊರಡಿಸಿದ್ದಾರೆ.

ದುಬಲಗುಂಡಿ ಗ್ರಾಮ ಪಂಚಾಯಿತಿಯ ಪಿಡಿಓ ಆಗಿರುವ ರಘುನಾಥ್ ಅವರು ಸಿಂಧನಕೇರಾ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಗ್ರಾಮ ಪಂಚಾಯಿತಿ ಸಭಾ ನಡವಳಿ ಪುಸ್ತಕದಲ್ಲಿ ನಕಲಿ ಹೆಸರು ಮತ್ತು ಹುದ್ದೆಗಳನ್ನು ಸೃಷ್ಟಿಸಿ, ದಾಖಲೆಗಳನ್ನು ತಿದ್ದುಪಡಿ ಮಾಡಿ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಫೆಬ್ರವರಿ 27ರಂದು ದೂರು ಸಲ್ಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಯೋಜನಾ ಮತ್ತು ಅಂದಾಜು ಮೌಲ್ಯಮಾಪನ ಅಧಿಕಾರಿಗಳು ಹಾಗೂ ಸಹಾಯಕ ಯೋಜನಾಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಪರಿಶೀಲನಾ ವರದಿಯಲ್ಲಿ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಸಿಬ್ಬಂದಿ ನೇಮಕಾತಿಗೆ ಪ್ರಯತ್ನಿಸಿರುವುದು, ಸಭಾ ನಡವಳಿಗಳನ್ನು ಅನಧಿಕೃತವಾಗಿ ಪಂಚತಂತ್ರ 2.0 ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಿರುವುದು ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.

ಜಂಟಿ ಪರಿಶೀಲನಾ ವರದಿಯ ಆಧಾರದ ಮೇಲೆ ರಘುನಾಥ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಹುಜನ ಯುವ ಪ್ಯಾಂಥರ್ ಸಂಘಟನೆಯ ಜಿಲ್ಲಾಧ್ಯಕ್ಷ ಪುಟ್ಟರಾಜ್ ದೀನೆ, ಸಾರ್ವಜನಿಕ ಹಿತಾಸಕ್ತಿಗಾಗಿ ಸಲ್ಲಿಸಿದ ದೂರಿಗೆ ನ್ಯಾಯ ದೊರೆತಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News