Bidar | ಹೊಲದಲ್ಲಿ 30 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪ: ವ್ಯಕ್ತಿಯ ಬಂಧನ
60 ಕೆ.ಜಿ.ಗೂ ಅಧಿಕ ತೂಕದ 100 ಗಾಂಜಾ ಗಿಡಗಳ ವಶ
ಬೀದರ್: ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ, 30 ಲಕ್ಷ ರೂ.ಗೂ ಅಧಿಕ ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಘಟನೆ ಔರಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಖಂಡಿಕೇರಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ನಡೆದಿದೆ.
ಬಂಧಿತನನ್ನು ವಿಠಲ್ ಅಕ್ಕಲವಾಡ್ (40) ಎಂದು ಗುರುತಿಸಲಾಗಿದೆ. ತನ್ನ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಹೊಲದಲ್ಲಿ ಬೆಳೆದಿದ್ದ 100 ಹಸಿ ಗಾಂಜಾ ಗಿಡಗಳು ಪತ್ತೆಯಾಗಿವೆ.
ನಂತರ ಪತ್ರಾಂಕಿತ ಅಧಿಕಾರಿ ಹಾಗೂ ಔರಾದ್ ತಹಶೀಲ್ದಾರ್ ಅವರ ಸಮಕ್ಷಮದಲ್ಲಿ ಗಾಂಜಾ ಗಿಡಗಳನ್ನು ಕಿತ್ತು ತೂಕ ಮಾಡಲಾಗಿದ್ದು, ಒಟ್ಟು 60 ಕೆ.ಜಿ. 430 ಗ್ರಾಂ ತೂಕ ಹೊಂದಿದ್ದವು. ಇವುಗಳ ಅಂದಾಜು ಮೌಲ್ಯ 30,21,500 ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿಠಲ್ ಅಕ್ಕಲವಾಡ್‌ನನ್ನು ಬಂಧಿಸಲಾಗಿದ್ದು, ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.