Basavakalyan | ಕಿಟ್ಟಾ ಅರಣ್ಯ ಪ್ರದೇಶದಲ್ಲಿ ಕೆಮಿಕಲ್ ತ್ಯಾಜ್ಯ ಸುರಿದವರ ವಿರುದ್ಧ ಕ್ರಮಕ್ಕೆ ಆಗ್ರಹ

Update: 2026-08-18 17:16 IST

ಬಸವಕಲ್ಯಾಣ: ತಾಲೂಕಿನ ಕಿಟ್ಟಾ ಗ್ರಾಮದ ವ್ಯಾಪ್ತಿಯ ಸರ್ವೆ ನಂ. 127/1ರ ಅರಣ್ಯ ಪ್ರದೇಶದಲ್ಲಿ ಅಪರಿಚಿತರು ರಾತ್ರಿ ವೇಳೆ ವಾಹನಗಳಲ್ಲಿ ಕೆಮಿಕಲ್ ತ್ಯಾಜ್ಯ ತಂದು ಸುರಿದು ಹೋಗಿರುವ ಆರೋಪ ಕೇಳಿಬಂದಿದೆ. ಘಟನೆ ಕುರಿತು ಸಮಗ್ರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾವಲುಪಡೆ ವತಿಯಿಂದ ಆಗ್ರಹಿಸಲಾಗಿದೆ.

ಈ ಕುರಿತು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿರುವ ಸಂಘಟನೆ, ಅರಣ್ಯ ಪ್ರದೇಶದಲ್ಲಿ ಕೈಗಾರಿಕಾ ತ್ಯಾಜ್ಯ ಸುರಿಯುವುದರಿಂದ ಗಿಡಮರಗಳು, ಸಸ್ಯಸಂಪತ್ತು, ಪಕ್ಷಿಗಳು, ಕಾಡುಪ್ರಾಣಿಗಳು ಸೇರಿದಂತೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.

ಪ್ರದೇಶದಲ್ಲಿ ಪ್ರತಿದಿನ ನೂರಾರು ಜನರು ಸಂಚರಿಸುತ್ತಿದ್ದು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದೇ ಪ್ರದೇಶದಲ್ಲಿರುವ ಮಂದಿರಕ್ಕೆ ಪ್ರತಿದಿನ ಸಾರ್ವಜನಿಕರು ಭೇಟಿ ನೀಡುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ಅರಣ್ಯ ಪ್ರದೇಶದಿಂದ ಸುಮಾರು 300 ಮೀಟರ್ ದೂರದಲ್ಲಿ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯವಿದ್ದು, ಇದೇ ಪ್ರದೇಶದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿದಿನ 300ರಿಂದ 400 ಮಂದಿ ಕೆಲಸ ಮಾಡುತ್ತಾರೆ. ತ್ಯಾಜ್ಯದಿಂದ ವಿದ್ಯಾರ್ಥಿನಿಯರು ಹಾಗೂ ಕಾರ್ಮಿಕರ ಆರೋಗ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಸಂಘಟನೆ ಆರೋಪಿಸಿದೆ.

ತ್ಯಾಜ್ಯ ಮಳೆ ನೀರಿನೊಂದಿಗೆ ಮಣ್ಣಿನಲ್ಲಿ ಸೇರಿ ಭೂಮಿಯ ಗುಣಮಟ್ಟ ಹಾಗೂ ಅಂತರ್ಜಲ ಕಲುಷಿತಗೊಳ್ಳುವ ಸಾಧ್ಯತೆ ಇರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ತ್ಯಾಜ್ಯದ ಮೂಲ ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ತಾಲೂಕಾಧ್ಯಕ್ಷ ಸುರೇಶ್ ಜಮ್ಮು, ಸುನಿಲ್ ಕೋರೆ, ಅಮುಲ್ ಗಾಯಕ್ವಾಡ್ ಹಾಗೂ ಲಕ್ಷ್ಮಣ್ ಸೂರ್ಯವಂಶಿ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News