ಹುಮನಾಬಾದ್‌: ಸೌಜನ್ಯ ಪ್ರಕರಣವೊಂದೇ ಅಲ್ಲ, ಇಡೀ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಮತ್ತು ಭದ್ರತೆ ಇಲ್ಲದಂತಾಗಿದೆ. ಪ್ರತಿದಿನ ಅತ್ಯಾಚಾರದ ಪ್ರಕರಣಗಳು ಕೇಳಿಬರುತ್ತಿವೆ. ಇಂತಹ ಸಮಾಜದಲ್ಲಿ ಹೆಣ್ಣಾಗಿ ಯಾಕೆ ಹುಟ್ಟಿದ್ದೇವೆ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ರೇಷ್ಮಾ ಹಂಸರಾಜ್ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನ್ಯಾಯಾಂಗ ಹೋರಾಟ ಕುರಿತ ಮೂಲ ಇಂಗ್ಲಿಷ್ ಪುಸ್ತಕವನ್ನು ಪತ್ರಕರ್ತ ನವೀನ್ ಸೂರಿಂಜೆ ಕನ್ನಡಕ್ಕೆ ಅನುವಾದಿಸಿದ ‘ಸೌಜನ್ಯ ತೀರ್ಪು–REPORTABLE’ ಪುಸ್ತಕದ ಕನ್ನಡ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೌಜನ್ಯ ಪ್ರಕರಣ ಮಾತ್ರವಲ್ಲದೆ, ದೇಶದ ಎಲ್ಲ ಅತ್ಯಾಚಾರ ಪ್ರಕರಣಗಳಿಗೂ ನ್ಯಾಯ ಸಿಗಬೇಕು. ದೆಹಲಿ ಮತ್ತು ಕೋಲ್ಕತ್ತಾ ಪ್ರಕರಣಗಳಂತೆ ದೇಶಾದ್ಯಂತ ನಡೆಯುವ ಪ್ರತಿಯೊಂದು ಪ್ರಕರಣದಲ್ಲೂ ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು. ಸಂವಿಧಾನ ನಮಗೆ ನೀಡಿರುವ ಶಕ್ತಿಯ ಮೂಲಕ ಸೌಜನ್ಯಳಿಗೂ ನ್ಯಾಯ ಕೊಡಿಸುತ್ತೇವೆ. ದೇಶದ ಎಲ್ಲ ಮಹಿಳೆಯರು ದೃಢವಾಗಿ ನಿಲ್ಲಬೇಕು ಎಂದು ಹೇಳಿದರು.

ಹೆಣ್ಣು ಅಷ್ಟೊಂದು ದುರ್ಬಲಳಲ್ಲ. ಮಹಿಳೆಯನ್ನು ದೇವಿ ಚಾಮುಂಡಿ ಎಂದು ಕರೆಯುತ್ತಾರೆ. ಆದರೆ, ಮಹಿಳೆಯರನ್ನು ದೇವರಂತೆ ಪರಿಗಣಿಸಿ ಪೂಜಿಸುವುದಷ್ಟೇ ಸಾಕಾಗುವುದಿಲ್ಲ. ತಮ್ಮ ಶಕ್ತಿಯನ್ನು ಅರಿತು, ಅನ್ಯಾಯದ ವಿರುದ್ಧ ರೌದ್ರ ರೂಪವನ್ನು ಪ್ರಕಟಿಸುವ ಮೂಲಕ ಮಹಿಳೆಯರು ತಮ್ಮನ್ನು ತಾವು ಸಬಲಗೊಳಿಸಿಕೊಂಡು ಹೋರಾಟದ ಹಾದಿ ಹಿಡಿಯಬೇಕು ಎಂದು ಸಲಹೆ ನೀಡಿದರು.

ಎಐಡಿಡಬ್ಲ್ಯುಎ ರಾಜ್ಯಾಧ್ಯಕ್ಷೆ ಚಂದ್ರಕುಮಾರಿ ಜೆ.ಮಾತನಾಡಿ, ಈ ಪುಸ್ತಕದಲ್ಲಿ ನ್ಯಾಯಾಲಯದ ತೀರ್ಪಿನ ವಿವರಗಳನ್ನು ದಾಖಲಿಸಲಾಗಿದೆ. ಸಂತ್ರಸ್ತೆಯ ಮೇಲೆ ನಡೆದ ಅನ್ಯಾಯ, ಶವಪರೀಕ್ಷೆಯಿಂದ ಹಿಡಿದು ವಿವಿಧ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಲು ನಡೆಸಿದ ಪ್ರಯತ್ನಗಳು ಹಾಗೂ ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ಸಣ್ಣವರ ಮೇಲಿನ ಅನ್ಯಾಯವನ್ನು ಹೇಗೆ ಮುಚ್ಚಿಹಾಕಲಾಗುತ್ತದೆ ಎಂಬ ಅಂಶಗಳನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಈ ವಿಚಾರಗಳು ಜನರಿಗೆ ತಿಳಿಯಬೇಕು ಮತ್ತು ಪುಸ್ತಕ ಎಲ್ಲರನ್ನೂ ತಲುಪಬೇಕು ಎಂಬ ಉದ್ದೇಶದಿಂದ ಬಿಡುಗಡೆ ಮಾಡಲಾಗಿದೆ ಎಂದರು.

ಪುಸ್ತಕದ ಮುಖಪುಟದಲ್ಲಿ ಸೌಜನ್ಯ ಅವರ ಭಾವಚಿತ್ರದೊಂದಿಗೆ ಸುಪ್ರೀಂ ಕೋರ್ಟ್ ಉಲ್ಲೇಖವಿದೆ. ಈ ಪುಸ್ತಕವನ್ನು ಎಲ್ಲೆಡೆ ಬಿಡುಗಡೆ ಮಾಡುವ ಮೂಲಕ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಸಂಘಟಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿವೈಎಫ್ಐ ಮುಖಂಡ ಶಶಿಕುಮಾರ್ ಡಾಂಗೆ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಸಿಐಟಿಯು ಜಿಲ್ಲಾ ಸಂಚಾಲಕಿ ಪ್ರೇಮಾ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಅನೀಲ್, ದಲಿತ ಸಂಘಟನೆ ಮುಖಂಡ ವೈಜನಾಥ್ ಸಿಂಧೆ, ಉಮಾ ಮುಲ್ಲಯ್ಯ, ಕೃಷ್ಣಾ ಹಂಸರಾಜ್, ರೈತ ಸಂಘದ ಮುಖಂಡ ಬಾಬುಮಿಯಾ ಹಾಗೂ ಸುನೀತಾ ಬೋಲಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor