×
Ad

Bidar | ಅಂಗವಿಕಲರ ಪಿಂಚಣಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಧರಣಿ

Update: 2026-07-16 22:16 IST

ಬೀದರ್: ಅಂಗವಿಕಲರ ಪಿಂಚಣಿ ಕಳೆದ ಮೂರು ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮೆಯಾಗದಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದರ್ ಜಿಲ್ಲಾ ಅಂಗವಿಕಲರ ಹಿತರಕ್ಷಣ ಸಮಿತಿಯ ವತಿಯಿಂದ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮೂರು ತಿಂಗಳಿಂದ ಅಂಗವಿಕಲರ ಪಿಂಚಣಿ ಬಿಡುಗಡೆಯಾಗದೆ ಸಾವಿರಾರು ಫಲಾನುಭವಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಬಾಕಿ ಉಳಿದಿರುವ ಪಿಂಚಣಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಂಗವಿಕಲರ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ, ಅಭಿವೃದ್ಧಿಗೆ ಶೇ.5ರಷ್ಟು ಅನುದಾನ ಮೀಸಲು, ಆದಾಯ ಮಿತಿ ಹೆಚ್ಚಳ, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಮತ್ತು ಪ್ರಯಾಣ ಭತ್ಯೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಅಂಗವಿಕಲರ ಸಮಸ್ಯೆಗಳ ಪರಿಶೀಲನಾ ಸಭೆಗಳನ್ನು ನಿಯಮಿತವಾಗಿ ನಡೆಸುವಂತೆ ಮನವಿ ಮಾಡಲಾಗಿದೆ.

ಆಧಾರ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಅನುದಾನ ಜಮಾ ಮಾಡಬೇಕು. ಬೀದರ್ ಜಿಲ್ಲೆಯಲ್ಲಿ ಅಂಗವಿಕಲರ ಭವನ ನಿರ್ಮಾಣ, ಮನೆ ಹಾಗೂ ನಿವೇಶನ ಮಂಜೂರು, ಆಧಾರ ಯೋಜನೆಯ ಗುರಿ ಹೆಚ್ಚಳ, ಶೇ.5ರಷ್ಟು ಅನುದಾನದ ಸಮರ್ಪಕ ಬಳಕೆ, ಸ್ವಯಂಸೇವಾ ಸಂಸ್ಥೆಗಳಿಗೆ ಅನುದಾನ ಬಿಡುಗಡೆ, ಬಾಕಿ ಇರುವ ತ್ರಿಚಕ್ರ ವಾಹನಗಳ ವಿತರಣೆ ಹಾಗೂ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನಾಮನಿರ್ದೇಶಿತ ಸದಸ್ಯರಾಗಿ ಅಂಗವಿಕಲರಿಗೆ ಅವಕಾಶ ಕಲ್ಪಿಸಿ, ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಇದೇ ವೇಳೆ, ಬೀದರ್ ನಗರದ ಶಾಹೀನ್ ನಗರದಲ್ಲಿರುವ ದಿವ್ಯಾಂಗ ದಂಪತಿಯ ಮನೆಗೆ ಹೋಗುವ ರಸ್ತೆಯನ್ನು ತಂತಿ ಹಾಕಿ ಬಂದ್ ಮಾಡಿರುವುದನ್ನು ಕೂಡಲೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಸಮಿತಿಯ ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜಪ್ಪ ಎಂ. ಪಾತರಪಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭು ಕುತ್ತಾಬಾದ್, ವಿಠಲ್ ಕಾಳಗೆ, ಶಾಂತಕುಮಾರ್ ಯದಲಾಪೂರ್, ಸುನೀಲ್ ಚಾಂಬೋಳ್, ತುಕಾರಾಮ್ ಬಗದಲ್, ಸಾಲೋಮನ್ ಚಟ್ನಳ್ಳಿ, ಪ್ರವೀಣ್ ಚಟ್ನಳ್ಳಿ, ಅರುಣ್ ಕಾಡವಾದ್, ಶ್ರೀನಿವಾಸ್ ಕ್ಯಾಸ, ಬಸವರಾಜ್ ನಾವದಗೇರಿ, ಸುನೀಲ್ ನೇಳಗಿ, ಬೆಂಜುಮ್ಯಾನ್ ಹಾಗೂ ದಿಲೀಪ್ ಕಾಡವಾದ್ ಸೇರಿದಂತೆ 50ಕ್ಕೂ ಹೆಚ್ಚು ಅಂಗವಿಕಲರು ಹಾಗೂ ವಿಧವೆಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News