Bidar | ಎಸ್‌ಐಆರ್ ಪ್ರಕ್ರಿಯೆ ಕುರಿತು ಮತದಾರರ ಸಮಸ್ಯೆಗಳ ಪರಿಹಾರಕ್ಕೆ ಕಾವಲು ಸಮಿತಿ ರಚನೆ
ಬೀದರ್ : ಎಸ್‌ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ಅರ್ಜಿ ಸಲ್ಲಿಕೆಗೆ ಜು.29 ಕೊನೆಯ ದಿನವಾಗಿದ್ದು, ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಅಗತ್ಯ ದಾಖಲೆಗಳ ಕೊರತೆಯಿಂದ ಅರ್ಜಿ ಸಲ್ಲಿಸಲು ತೊಂದರೆ ಅನುಭವಿಸುತ್ತಿರುವ ಅನಕ್ಷರಸ್ಥರು, ಬಡವರು ಹಾಗೂ ಮಹಿಳೆಯರಿಗೆ ನೆರವು ನೀಡುವ ಉದ್ದೇಶದಿಂದ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ‘ಕಾವಲು ಸಮಿತಿ’ ರಚಿಸಲು ಜಿಲ್ಲಾ ಮಟ್ಟದ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಪ್ರಗತಿ, ನ್ಯೂನತೆಗಳು ಹಾಗೂ ಮತದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಗ್ರಾಮೀಣ ಬೂತ್‌ಗಳು ಹಾಗೂ ನಗರ-ಪಟ್ಟಣಗಳ ವಾರ್ಡ್‌ಗಳಲ್ಲಿ ಮತದಾರರಿಗೆ ಎಸ್‌ಐಆರ್ ಅರ್ಜಿ ಭರ್ತಿ ಮಾಡಲು ಸಮಿತಿಯ ಸದಸ್ಯರು ನೆರವು ನೀಡಬೇಕು. ಅರ್ಜಿ ಸಲ್ಲಿಕೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ತ್ವರಿತವಾಗಿ ಪರಿಹರಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಅಲ್ಲದೆ, ಮತದಾರರು ಅರ್ಜಿ ಭರ್ತಿಯ ವೇಳೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜು.17ರಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆ ತೀರ್ಮಾನಿಸಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀಕಾಂತ್ ಸ್ವಾಮಿ ವಹಿಸಿದ್ದರು. ಸಂಚಾಲಕ ಓಂಪ್ರಕಾಶ್ ರೊಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ವರ್ ಬಿರಾದಾರ್ ಸಭೆಯ ನಡಾವಳಿಯನ್ನು ವಾಚಿಸಿದರು.
ಸಭೆಯಲ್ಲಿ ಡಾ.ಮಕ್ಸೂದ್ ಚಂದಾ, ಅಬ್ದುಲ್ ಮನ್ನಾನ್ ಸೇಠ್, ವಿಠಲದಾಸ್ ಪ್ಯಾಗೆ, ನಿಜಾಮುದ್ದೀನ್, ಬಾಲಾಜಿ ಕುಂಬಾರ್, ಸಂತೋಷ್ ಜೋಳದಾಬಕೆ, ಮಹೇಶ್ ಗೋರನಾಳಕರ್, ಸಿದ್ದು ಫುಲಾರಿ, ರಮೇಶ್ ಮಠಪತಿ, ಚೆನ್ನಬಸಯ್ಯ ಗಣಾಚಾರಿ, ಸಂದೀಪ್ ಮುಕುಂದೆ, ಮೊಹಮ್ಮದ್ ಫಯಾಜುದ್ದೀನ್, ಸುಂದರ್ ಜ್ಞಾನಿ, ಅಬ್ದುಲ್ ಸಮದ್, ವಕೀಲ ಮೊಹಮ್ಮದ್ ಫಿರಾಸತ್ ಅಲಿ, ಅರುಣ್ ಪಟೇಲ್, ಡಾ. ಪೃಥ್ವಿರಾಜ್ ಹಾಗೂ ಜಯವಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.