Bidar | ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಲಿ : ಡಾ.ಬಾಬುರಾವ್ ಮೂಡುಬಿ
ಬೀದರ್: ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದ ಮನೋಭಾವದಿಂದ ಬದುಕಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ. ಬಾಬುರಾವ್ ಮೂಡುಬಿ ಹೇಳಿದರು.
ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಬಿಎ, ಬಿಎಸ್ಸಿ, ಬಿಕಾಂ ಹಾಗೂ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಕಾಲೇಜಿನ ವಿವಿಧ ಸಮಿತಿಗಳ ಕಾರ್ಯಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಪರಸ್ಪರ ಸಹಬಾಳ್ವೆ, ಸಹಕಾರ ಹಾಗೂ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಸವಕಲ್ಯಾಣದ ಸಿಪಿಐ ಅಲಿಸಾಬ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ನಿರಂತರ ಅಧ್ಯಯನವನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ರೈತರ ಪಾತ್ರ ಮಹತ್ವದ್ದಾಗಿದ್ದು, ಅವರ ಶ್ರಮವನ್ನು ಗೌರವಿಸಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೆಂಗಟೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿ ತಲುಪಬೇಕಾದರೆ ನಿರಂತರ ಅಧ್ಯಯನ ಅಗತ್ಯವಾಗಿದೆ. ಸೃಜನಶೀಲತೆ, ಶಿಸ್ತು, ತಾಳ್ಮೆ ಹಾಗೂ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಬಲಿರಾಂ ಹುಡೆ, ಪ್ರೊ. ಮಾಮನಶೆಟ್ಟಿ, ಪ್ರೊ. ಸಂತೋಷಸಿಂಗ್ ಬಯಾಸ್, ಪ್ರೊ. ವಿಷ್ಣುವರ್ಧನ್, ಪ್ರೊ. ಗಿರೀಶ್ ಯಡ್ರಾಮಿ ಹಾಗೂ ಪ್ರೊ. ಮಂಜುನಾಥ್ ದೇಶಪಾಂಡೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಚಂದ್ರಕಾಂತ್ ಗಾಯಕವಾಡ್, ಡಾ. ಪ್ರತಿಭಾ ಬಡಿಗೇರ್, ಡಾ. ಶ್ರೀಕಾಂತ್ ಚಹ್ವಾಣ ಹಾಗೂ ಮೀನಾಕ್ಷಿ ಬಿರಾದರ್ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.