ಹುಮನಾಬಾದ್: ಶಿಕ್ಷಕರ ಹಕ್ಕು, ಗೌರವ ಮತ್ತು ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಬದ್ಧತೆ ಅಚಲವಾಗಿದೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ಹೇಳಿದರು.

ಹುಮನಾಬಾದ್ ಪಟ್ಟಣದ ರಾಮ್ ಮತ್ತು ರಾಜ್, ಅಂಜನಾ ದೇವಿ, ಬಸವ ತೀರ್ಥ ಹಾಗೂ ಶಾಹಿನ್ ಶಿಕ್ಷಣ ಸಂಸ್ಥೆಗಳಿಗೆ ಗುರುವಾರ ಭೇಟಿ ನೀಡಿ, ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಶಶಿಲ್ ನಮೋಶಿ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

ಶಿಕ್ಷಕರ ಹಕ್ಕುಗಳ ರಕ್ಷಣೆ, ವೃತ್ತಿಪರ ಅಭಿವೃದ್ಧಿ, ವರ್ಗಾವಣೆ ಸಮಸ್ಯೆಗಳು, ವೇತನ ಸಂಬಂಧಿತ ಬೇಡಿಕೆಗಳು ಹಾಗೂ ಹಳೆ ಪಿಂಚಣಿ ಯೋಜನೆಯ ಮರುಸ್ಥಾಪನೆ ಸೇರಿದಂತೆ ಶಿಕ್ಷಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಧ್ವನಿಯಾಗಿ ಕಾರ್ಯನಿರ್ವಹಿಸುವ ಸಮರ್ಥ ಪ್ರತಿನಿಧಿಯನ್ನು ಆಯ್ಕೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

ಶಿಕ್ಷಕರ ಆಶೋತ್ತರಗಳಿಗೆ ಸ್ಪಂದಿಸುವ, ಅವರ ನ್ಯಾಯಯುತ ಬೇಡಿಕೆಗಳಿಗೆ ಧ್ವನಿಯಾಗಿ ನಿಲ್ಲುವ ಹಾಗೂ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಬದ್ಧರಾಗಿರುವ ಶಶಿಲ್ ನಮೋಶಿ ಅವರಿಗೆ ಶಿಕ್ಷಕರು ತಮ್ಮ ಅಮೂಲ್ಯ ಮತದ ಮೂಲಕ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಗಿರಿರಾಜ್ ಕಠೋಳ್ಳಿ, ಡಾ.ಬಳಿರಾಮ್ ಹುಡ್ಡೆ, ಸಂತೋಷಕುಮಾರ್ ಚನ್ನಾಳಿಕರ್, ಅಮೀರ್ ಖಾನ್, ಬಿಜೆಪಿ ಮಂಡಲ ಅಧ್ಯಕ್ಷ ಅನಿಲ್ ಪಸರ್ಗಿ, ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗಭೂಷಣ ಸಂಗಮ್, ಮುಖಂಡರಾದ ಗಿರೀಶ್ ತುಂಬಾ, ಮಾಣಿಕರೆಡ್ಡಿ, ಶಿವರಾಜ್ ಚಿನಕೇರಾ, ಗೌತಮ್ ಸೇಡೊಳೆ, ನಗರ ಘಟಕದ ಅಧ್ಯಕ್ಷ ಜ್ಞಾನದೇವ್ ಧೂಮಳೆ, ಮಲ್ಲಿಕಾರ್ಜುನ್ ಸಿಗಿ ಹಾಗೂ ಸಂಜು ವಾಡೇಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor