ಬೀದರ್: ವಿದ್ಯಾರ್ಥಿಗಳು ಅಧ್ಯಯನದ ಸಮಯದಲ್ಲಿ ಆನ್‌ಲೈನ್ ಗೇಮ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಸಾಧನೆಯ ಗುರಿಯತ್ತ ಗಮನಹರಿಸಬೇಕು. ಕನಸುಗಳನ್ನು ಬೆನ್ನತ್ತಿ ಪರಿಶ್ರಮದ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೇಹ್ವಾಲ್ ಕರೆ ನೀಡಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಗುರುನಾನಕ್ ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಮ್ಯಾರಥಾನ್ 2.0 ‘ಶಾಂತಿ ಹಾಗೂ ಮಾನವೀಯತೆಗಾಗಿ ಓಟ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಧನೆ ಮಾಡಬೇಕೆಂಬ ಆಸೆ ಇದ್ದರೆ ಇಂದೇ ಉತ್ಸಾಹದಿಂದ ಆರಂಭಿಸಬೇಕು. ನಾಳೆಯವರೆಗೆ ಕಾಯಬಾರದು. ಎಲ್ಲರೂ ತಮ್ಮ ಬದುಕಿಗಾಗಿ ಬದುಕುತ್ತಾರೆ. ಆದರೆ, ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಬದುಕುವವರ ಸಂಖ್ಯೆ ಕಡಿಮೆಯಿದೆ. ದೇಶಕ್ಕೆ ಏನಾದರೂ ಕೊಡುಗೆ ನೀಡಿ ತಮ್ಮ ಹೆಸರನ್ನು ಉಳಿಸಿಕೊಳ್ಳಬೇಕು. ಪುಸ್ತಕ ಮುಚ್ಚುವ ವ್ಯಕ್ತಿಗಳಾಗದೆ, ಪುಸ್ತಕದ ಪುಟಗಳನ್ನು ತೆರೆದು ಓದುವ ಆದರ್ಶ ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇಂದಿನ ದಿನಗಳಲ್ಲಿ ಪಾಠದ ಜೊತೆಗೆ ಕ್ರೀಡೆಯೂ ಬಹಳ ಮುಖ್ಯವಾಗಿದೆ. ಪ್ರತಿದಿನ ಆಟವಾಡಲು ಸಮಯ ಮೀಸಲಿಡಬೇಕು. ಕ್ರೀಡೆಗೆ ಮಹತ್ವ ನೀಡಿದರೆ ಅದರಲ್ಲಿಯೂ ಸಾಧನೆ ಮಾಡಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಗುರುನಾನಕ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಮಾತನಾಡಿ, ಬೀದರ್ ಮ್ಯಾರಥಾನ್ 2.0ರಲ್ಲಿ ಸುಮಾರು 7,500 ಜನರು ನೋಂದಣಿ ಮಾಡಿಕೊಂಡಿದ್ದು, ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೇಹ್ವಾಲ್ ಅವರು ಬೀದರ್‌ಗೆ ಆಗಮಿಸಿರುವುದು ಸಂತೋಷದ ಸಂಗತಿಯಾಗಿದೆ. ಅವರು ಯುವಜನರಿಗೆ ಮಾದರಿಯಾಗಿದ್ದಾರೆ. ಆತ್ಮವಿಶ್ವಾಸ ಮತ್ತು ಭರವಸೆಯಿಂದ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು. ಸಾಧನೆಗೆ ಅಡ್ಡಮಾರ್ಗ ಹುಡುಕದೆ, ಸತತ ಪರಿಶ್ರಮ ಹಾಗೂ ಸಮಯಪಾಲನೆಯ ಮೂಲಕ ಯಶಸ್ಸು ಗಳಿಸಬೇಕು ಎಂದು ಮಕ್ಕಳಿಗೆ ಹುರಿದುಂಬಿಸಿದರು.

ಮ್ಯಾರಥಾನ್‌ನಲ್ಲಿ 21 ಕಿ.ಮೀ., 10 ಕಿ.ಮೀ., 5 ಕಿ.ಮೀ. ಹಾಗೂ 3 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧಿಸಿದ ಪುರುಷ ಮತ್ತು ಮಹಿಳಾ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಮೆಡಲ್, ಟ್ರೋಫಿ, ಪ್ರಮಾಣಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಾನಕ ಝಿರಾ ಸಾಹೇಬ್ ಫೌಂಡೇಶನ್ ಅಧ್ಯಕ್ಷ ಡಾ. ಎಸ್. ಬಲಬೀರ್ ಸಿಂಗ್, ಶಾಸಕರಾದ ರಹೀಮ್ ಖಾನ್, ಡಾ. ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಕೆಕೆಆರ್‌ಡಿಬಿ ಕಾರ್ಯದರ್ಶಿ ನಲೀನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಕರ್ನಾಟಕ ರಾಜ್ಯ ಅಕ್ಕ ಪಡೆಯ ಸಲಹೆಗಾರ್ತಿ ಶೈನಿ ಪ್ರದೀಪ್ ಗುಂಟಿ, ಸಂಸ್ಥೆಯ ಕಾರ್ಯದರ್ಶಿ ಸರದಾರ್ ನಾನಕ್ ಸಿಂಗ್, ಸರದಾರ್ ಪುನೀತ್ ಸಿಂಗ್ ಹಾಗೂ ಪವಿತ್ ಸಿಂಗ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ/ವಾರ್ತಾಭಾರತಿ

ಬೀದರ್ ಜಿಲ್ಲಾ ವರದಿಗಾರರು

ಚಿತ್ರಶೇನ ವ್ಹಿ. ಫುಲೆ ಅವರು 2023ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 2025ರಿಂದ ವಾರ್ತಾಭಾರತಿ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿರುವ ಇವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಬೀದರ್ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ