ಬೀದರ್: ಕಾರಂಜಾ ಯೋಜನೆಗೆ ಭೂಮಿ ನೀಡಿದ 28 ಹಳ್ಳಿಗಳ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ನೀಡುವಂತೆ ಆಗ್ರಹಿಸಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯು ‘ಹೋರಾಟ 2.0’ ಆರಂಭಿಸಿದೆ. ಹೋರಾಟದ ಮೊದಲ ಹಂತವಾಗಿ ನ. 30ರಂದು ಬೆಳಿಗ್ಗೆ 9.30ಕ್ಕೆ ಬೀದರ್ ಜಿಲ್ಲಾ ಕೇಂದ್ರ ಬಸ್ ನಿಲ್ದಾಣವನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಅಂದು ಬೆಳಿಗ್ಗೆ ಸಂತ್ರಸ್ತ ರೈತರು ಬರೀದ್ ಶಾಹಿ ಉದ್ಯಾನವನದ ಗೇಟ್ ಬಳಿ ಜಮಾಯಿಸಿ, ಅಲ್ಲಿಂದ ಬಸ್ ನಿಲ್ದಾಣಕ್ಕೆ ತೆರಳಿ ಬಂದ್ ಚಳವಳಿ ನಡೆಸಲಿದ್ದಾರೆ. ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೆ ವಿಳಂಬ ಮಾಡುತ್ತಿರುವ ಸರ್ಕಾರಕ್ಕೆ ಎಚ್ಚರಿಕೆ ನೀಡುವುದು ಈ ಹೋರಾಟದ ಉದ್ದೇಶವಾಗಿದೆ ಎಂದು ಸಮಿತಿ ತಿಳಿಸಿದೆ.

ಚಳವಳಿಯು ಶಾಂತಿಯುತ, ಸಂವಿಧಾನಬದ್ಧ ಹಾಗೂ ಅಹಿಂಸಾತ್ಮಕವಾಗಿ ನಡೆಯಲಿದೆ. ಈ ಕುರಿತು ಪೊಲೀಸ್ ಇಲಾಖೆ ಮತ್ತು ಸಾರಿಗೆ ನಿಗಮದ ಅಧಿಕಾರಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿದೆ. ಬಂದ್‌ನಿಂದ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿರುವ ಸಮಿತಿಯು, ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಂಡು ಸಹಕರಿಸುವಂತೆ ಮನವಿ ಮಾಡಿದೆ.

28 ಹಳ್ಳಿಗಳ ಸಂತ್ರಸ್ತ ರೈತರು, ಬೀದರ್ ಜಿಲ್ಲೆಯ ಜನತೆ, ರೈತ, ಕನ್ನಡಪರ, ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ ಹಾಗೂ ಯುವ ಸಂಘಟನೆಗಳು ಮತ್ತು ವ್ಯಾಪಾರಿ ಸಂಘಗಳು ಹೋರಾಟಕ್ಕೆ ಬೆಂಬಲ ನೀಡಬೇಕು. ಎಲ್ಲರೂ ಅಂದು ಬೆಳಿಗ್ಗೆ 9.30ಕ್ಕೆ ಬರೀದ್ ಶಾಹಿ ಉದ್ಯಾನವನದ ಗೇಟ್ ಬಳಿ ಸೇರಬೇಕು ಎಂದು ಸಮಿತಿ ಮನವಿ ಮಾಡಿದೆ.

ಮಾಧ್ಯಮಗಳು ರೈತರ ಹೋರಾಟದ ಧ್ವನಿಯನ್ನು ಸರ್ಕಾರದ ಗಮನಕ್ಕೆ ತರುವಂತೆ ಸಹ ಸಮಿತಿಯು ಕೋರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ/ವಾರ್ತಾಭಾರತಿ

ಬೀದರ್ ಜಿಲ್ಲಾ ವರದಿಗಾರರು

ಚಿತ್ರಶೇನ ವ್ಹಿ. ಫುಲೆ ಅವರು 2023ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 2025ರಿಂದ ವಾರ್ತಾಭಾರತಿ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿರುವ ಇವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಬೀದರ್ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ