ಬಸವಕಲ್ಯಾಣ: “ಹಿಂದೂ ನಾವೆಲ್ಲರೂ ಒಂದು” ಎಂಬ ನಿಲುವಿನೊಂದಿಗೆ ಸರ್ಕಾರದ ಸವಲತ್ತುಗಳಿಗಾಗಿ ಪ್ರತ್ಯೇಕ ಧರ್ಮದ ವಿಚಾರ ಮಾಡದೆ ಒಗ್ಗಟ್ಟಾಗಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಅವರ ಹೇಳಿಕೆಗೆ ಲಿಂಗಾಯತ ಸಮುದಾಯದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ನಡೆಯುತ್ತಿರುವ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ವಿಜಯೇಂದ್ರ, ಸರ್ಕಾರಿ ಸವಲತ್ತುಗಳಿಗಾಗಿ ಪ್ರತ್ಯೇಕ ಧರ್ಮದ ಬೇಡಿಕೆ ಮುಂದಿಡಬಾರದು. ಆ ಜಾತಿ, ಈ ಜಾತಿ, ಆ ಧರ್ಮ, ಈ ಧರ್ಮ ಎಂಬ ಭೇದ ಮಾಡದೆ, ನಾವೆಲ್ಲರೂ ಹಿಂದೂಗಳು, ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಸಾಗಬೇಕು ಎಂದು ಹೇಳಿದರು.

ವಿಜಯೇಂದ್ರ ಅವರ ಹೇಳಿಕೆಗೆ ಅಸಮಾಧಾನಗೊಂಡ ಲಿಂಗಾಯತ ಸಮುದಾಯದ ಮುಖಂಡರು, ಅವರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲೇ ವಿರೋಧ ವ್ಯಕ್ತಪಡಿಸಿದರು. ‘ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಜಯವಾಗಲಿ’, ‘ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಗಬೇಕು’ ಹಾಗೂ ‘ಗೋ ಬ್ಯಾಕ್ ವಿಜಯೇಂದ್ರ’ ಎಂದು ಘೋಷಣೆಗಳನ್ನು ಕೂಗಿದರು.

“ನಿಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಧರ್ಮವನ್ನು ಬಲಿ ಕೊಡಬಾರದು” ಎಂದು ಪ್ರತಿಭಟನಾಕಾರರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ತೀವ್ರತೆಯಿಂದಾಗಿ ವಿಜಯೇಂದ್ರ ಅವರು ತಮ್ಮ ಭಾಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದರು. ಇದರಿಂದ ಕಾರ್ಯಕ್ರಮದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ/ವಾರ್ತಾಭಾರತಿ

ಬೀದರ್ ಜಿಲ್ಲಾ ವರದಿಗಾರರು

ಚಿತ್ರಶೇನ ವ್ಹಿ. ಫುಲೆ ಅವರು 2023ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 2025ರಿಂದ ವಾರ್ತಾಭಾರತಿ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿರುವ ಇವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಬೀದರ್ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ