Bhalki | ವೃತ್ತಿಜೀವನದ ಒತ್ತಡ ನಿಭಾಯಿಸಲು ಕ್ರೀಡಾ ಚಟುವಟಿಕೆ ಅಗತ್ಯ: ನ್ಯಾ.ರಾಜಶೇಖರ್ ಹರಸೂರ್
ಜಿಲ್ಲಾ ಮಟ್ಟದ ವಕೀಲರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಭಾಲ್ಕಿ: ದಿನನಿತ್ಯದ ವೃತ್ತಿಜೀವನದ ಒತ್ತಡ ಮತ್ತು ಜಂಜಾಟಗಳ ನಡುವೆ ಮಾನಸಿಕ ಹಾಗೂ ದೈಹಿಕ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರಿಗೂ ಕ್ರೀಡಾ ಚಟುವಟಿಕೆಗಳು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜಶೇಖರ್ ಹರಸೂರ್ ಹೇಳಿದರು.
ನಗರದ ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜಿನ ಆವರಣದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ರವಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಕೀಲರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆ ಕೇವಲ ಮನರಂಜನೆಗೆ ಸೀಮಿತವಾಗಿರದೆ, ಉತ್ತಮ ಆರೋಗ್ಯ ಮತ್ತು ಮನಃಶಾಂತಿಗೂ ಪೂರಕವಾಗಿದೆ. ಪ್ರತಿನಿತ್ಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ವೃದ್ಧಿಸುವುದರ ಜತೆಗೆ ಕೆಲಸದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹೇಶ ರಾಚೋಟೆ ಮಾತನಾಡಿ, ಡಿ. 3ರಂದು ನಡೆಯುವ ವಕೀಲರ ದಿನಾಚರಣೆ ಪ್ರಯುಕ್ತ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗಾಗಿ ಕೇರಂ, ಮ್ಯೂಸಿಕಲ್ ಚೇರ್, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಹಾಗೂ ಆರೋಗ್ಯ ಸಂಬಂಧಿತ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಕಿರಿಯ ನ್ಯಾಯಾಧೀಶೆ ಸವಿತಾ ಮಾತನಾಡಿ, ಕ್ರೀಡೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಉತ್ತಮ ಕ್ರೀಡಾ ಮನೋಭಾವದೊಂದಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತೆ ಆಟಗಾರರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಕೆಐಟಿ ಪ್ರಾಂಶುಪಾಲ ಡಾ. ಎಂ.ಎ. ದೇವಾಣಿ, ನಗರಸಭೆ ಕಮಿಷನರ್ ಸಂಗಮೇಶ್ ಕಾರಬಾರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಲ್ತಾಫ್, ಭಾಲ್ಕಿ ಪೊಲೀಸ್ ವೃತ್ತ ನಿರೀಕ್ಷಕ ಅಂಬರೀಷ್, ಬೀದರ್ ವಕೀಲರ ಸಂಘದ ಅಧ್ಯಕ್ಷ ಸಂಜಯ್ ಮಠಪತಿ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಮಕರಂದ್ ಮಾನಕಾರಿ, ಕಾರ್ಯದರ್ಶಿ ವಾಗೇಶ್ ಎಸ್. ಪಾಟೀಲ್, ಜಂಟಿ ಕಾರ್ಯದರ್ಶಿ ನೀಲಕಂಠ್ ಬಿರಾದಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ವಕೀಲರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
ವಕೀಲರ ವೃತ್ತಿಜೀವನದಲ್ಲಿ ವಿವಿಧ ರೀತಿಯ ಒತ್ತಡಗಳು ಸಹಜ. ಇಂತಹ ಒತ್ತಡಗಳ ನಡುವೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಚೈತನ್ಯ ಹೆಚ್ಚುವುದರ ಜತೆಗೆ ಪರಸ್ಪರ ಸೌಹಾರ್ದತೆ, ಸ್ನೇಹಭಾವ ಹಾಗೂ ಒಗ್ಗಟ್ಟು ವೃದ್ಧಿಯಾಗುತ್ತದೆ.
— ಮಹೇಶ ರಾಚೋಟೆ, ಅಧ್ಯಕ್ಷರು, ತಾಲೂಕು ವಕೀಲರ ಸಂಘ, ಭಾಲ್ಕಿ.