ಸುದರ್ಶನ್ ರಟಕಲ್

ಬೀದರ್: ಭಾಲ್ಕಿ ತಾಲೂಕಿನ ಕರಡ್ಯಾಳ ಗ್ರಾಮದ ಸಮೀಪದ ರೈಲ್ವೆ ಹಳಿ ಮೇಲೆ ಗುರುವಾರ ಬೆಳಿಗ್ಗೆ ಯುವಕನೊಬ್ಬನ ಮೃತದೃಹ ಪತ್ತೆಯಾಗಿದ್ದು, ಆತನನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಮೃತರನ್ನು ಸುದರ್ಶನ್ ರಟಕಲ್ (21) ಎಂದು ಗುರುತಿಸಲಾಗಿದ್ದು, ಭಾಗ್ಯವಾನ್, ವಿಠಲ್, ಸಚಿನ್, ಸಾಯಿ ಕಾಂಬ್ಳೆ ಹಾಗೂ ಆದಿತ್ಯ ಕಾಂಬ್ಳೆ ಎಂಬ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಸುದರ್ಶನ್ ಬಿ.ಎಸ್ಸಿ ಐದನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಬುಧವಾರ ರಾತ್ರಿ ಸುಮಾರು 8 ಗಂಟೆಗೆ ಸುದರ್ಶನ್ ಅವರ ಸ್ನೇಹಿತರೊಬ್ಬರು ಅವರನ್ನು ಕರೆದುಕೊಂಡು ಹೋಗಿದ್ದರು. ಬಳಿಕ ನಾಲ್ಕೈದು ಮಂದಿ ಸೇರಿಕೊಂಡು ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ, ರೈಲ್ವೆ ಹಳಿ ಮೇಲೆ ಮೃತದೇಹವನ್ನು ಬಿಸಾಡಿದ್ದಾರೆ ಎಂದು ಸುದರ್ಶನ್ ಅವರ ತಂದೆ ಅಂಬರೀಶ್ ಆರೋಪಿಸಿದ್ದಾರೆ. ಕೊಲೆಗೆ ಕಾರಣವೇನು ಎಂಬುದು ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸುದರ್ಶನ್ ಮೃತಪಟ್ಟಿರುವ ಮಾಹಿತಿ ತಿಳಿಯುತ್ತಿದ್ದಂತೆ ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ್ ಗ್ರಾಮದ ನಿವಾಸಿ, ಭಾಲ್ಕಿ ನಗರದಲ್ಲಿ ವಾಸವಾಗಿದ್ದ ಆರತಿ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸುದರ್ಶನ್ ಹಾಗೂ ಆರತಿ ನಡುವೆ ಪ್ರೇಮ ಸಂಬಂಧವಿತ್ತೇ ಎಂಬ ಅನುಮಾನ ವ್ಯಕ್ತವಾಗಿದ್ದು, ಆರೋಪಿಗಳ ಪೈಕಿ ಒಬ್ಬಾತ ಆರತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಸುದರ್ಶನ್ ಅವರನ್ನು ಕೊಲೆ ಮಾಡಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದು ರೈಲ್ವೆ ಪೊಲೀಸರು ಹಾಗೂ ಭಾಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಂಟಿಯಾಗಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor