Bidar | ಸಿಪಿಐ(ಎಂ) ರಾಜ್ಯ ಸಮಿತಿಯ ನಿಯೋಗ ಭೇಟಿ : ಎಸ್‌ಐಆರ್ ಫಾರಂ ನಂಬರ್-7ರ ಬಗ್ಗೆ ಪರಿಶೀಲನೆ
ಬೀದರ್: ಸಿಪಿಐ(ಎಂ) ರಾಜ್ಯ ಸಮಿತಿಯ ನಿಯೋಗವು ಭಾಲ್ಕಿ ತಾಲ್ಲೂಕಿನ ಎಣಕೂರು ಗ್ರಾಮಕ್ಕೆ ಗುರುವಾರ ಭೇಟಿ ನೀಡಿ, ಫಾರಂ-7 ಸಲ್ಲಿಸುವ ಮೂಲಕ ಒಂದೇ ಸಮುದಾಯದ ನೂರಾರು ಜನರ ಮತದಾನದ ಹಕ್ಕಿಗೆ ಕುತ್ತು ತರುವ ಪ್ರಯತ್ನ ನಡೆದಿದೆ ಎಂಬ ಆರೋಪದ ಕುರಿತು ಪರಿಶೀಲನೆ ನಡೆಸಿ, ಸತ್ಯಾಂಶಗಳನ್ನು ಸಂಗ್ರಹಿಸಿತು.
ನಿಯೋಗವು ಗ್ರಾಮದ ವಿವಿಧ ಸಮುದಾಯಗಳ ಜನರನ್ನು ಭೇಟಿ ಮಾಡಿ ಎಸ್‌ಐಆರ್ ಕುರಿತು ಮಾಹಿತಿ ಸಂಗ್ರಹಿಸಿತು. ಇಬ್ಬರು ಬಿಎಲ್‌ಒ ಹಾಗೂ ಬಿಎಲ್‌ಎಗಳೊಂದಿಗೆ ಮಾತುಕತೆ ನಡೆಸಿ ಸಮಗ್ರ ಮಾಹಿತಿ ಪಡೆಯಲಾಯಿತು. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಫಾರಂ-7ಗಳನ್ನು ತುಂಬಿಸಿ ಸಲ್ಲಿಸಲಾಗಿದೆ ಎಂದು ಗ್ರಾಮಸ್ಥರು ನಿಯೋಗದ ಗಮನಕ್ಕೆ ತಂದರು. ಸೆ.22ರಂದು ಎರಡು ಬೂತ್‌ಗಳ ವ್ಯಾಪ್ತಿಯಲ್ಲಿ ಒಟ್ಟು 68 ಫಾರಂ-7ಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇದಲ್ಲದೆ, ಅಪ್‌ಲೋಡ್ ಮಾಡದೇ ದೂರುದಾರರ ಬಳಿ ಉಳಿದಿರುವ ಫಾರಂ-7ಗಳ ಸಂಖ್ಯೆ 198 ಇದೆ ಎಂದು ತಿಳಿಸಲಾಯಿತು. ಈ ರೀತಿಯ ಫಾರಂಗಳನ್ನು ತುಂಬಿ ಸಲ್ಲಿಸುವಂತೆ ಒತ್ತಡಗಳು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಸಲ್ಲಿಸಲಾಗಿದೆ ಎಂಬ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ ಎಂದು ನಿಯೋಗ ತಿಳಿಸಿದೆ.
ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಒಟ್ಟು ಮತದಾರರ ಸಂಖ್ಯೆ 725 ಇದ್ದು, ಅವರಲ್ಲಿ ಅರ್ಧಕ್ಕರ್ಧ ಮತದಾರರ ಹಕ್ಕನ್ನು ರದ್ದುಗೊಳಿಸಲು ಫಾರಂ-7 ಬಳಸಲಾಗಿದೆ ಎಂಬ ವಿಷಯಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ನೂರಾರು ವರ್ಷಗಳಿಂದ ಒಟ್ಟಾಗಿ ಬದುಕುತ್ತಿರುವ ಜನರ ಮತದಾನದ ಹಕ್ಕನ್ನು ಕಸಿಯುವ ಷಡ್ಯಂತ್ರದ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾಲ್ಕಿ ತಾಲ್ಲೂಕಿನ ಎಣಕೂರು ಗ್ರಾಮದಲ್ಲಿ ಪ್ರತಿವರ್ಷ ಮೊಹರಂ ಆಚರಣೆ ನಡೆಯುತ್ತದೆ. ಈ ದುಃಖದ ದಿನದ ಸಾಂಸ್ಕೃತಿಕ ಆಚರಣೆಯಲ್ಲಿ ಗ್ರಾಮದ ಎಲ್ಲ ಸಮುದಾಯಗಳ ಜನರು ಭೇದಭಾವವಿಲ್ಲದೆ ಪಾಲ್ಗೊಳ್ಳುತ್ತಾರೆ. ಯಾವುದೇ ಭೇದಭಾವವಿಲ್ಲದೆ ಬದುಕುತ್ತಿರುವ ತಮ್ಮ ನಡುವೆ ರಾಜಕೀಯ ದುರುದ್ದೇಶದಿಂದ ಮತದಾನದ ಹಕ್ಕಿನ ವಿಚಾರದಲ್ಲಿ ಈ ರೀತಿಯ ಸಂಚು ರೂಪಿಸಿರುವುದನ್ನು ಖಂಡಿಸುವುದಾಗಿ ಗ್ರಾಮಸ್ಥರು ನಿಯೋಗದ ಎದುರು ತಿಳಿಸಿದ್ದಾರೆ.
ನಿಟ್ಟೂರ ಮತ್ತು ಖಟಕ್ ಚಿಂಚೋಳಿ ಗ್ರಾಮಗಳ ಮಾಹಿತಿಯನ್ನೂ ನಿಯೋಗ ಸಂಗ್ರಹಿಸಿದೆ. ಮತದಾನದ ಹಕ್ಕನ್ನು ಕಸಿಯುವ ಷಡ್ಯಂತ್ರದ ಹಿಂದೆ ಕೋಮು ಸೇಡಿನ ವ್ಯವಸ್ಥಿತ ಸಂಚು ಇದೆ ಎಂಬುದು ನಿಯೋಗದ ಗಮನಕ್ಕೆ ಬಂದಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಕೆ. ನೀಲಾ ತಿಳಿಸಿದ್ದಾರೆ.
ನಿಯೋಗದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಕೆ. ನೀಲಾ, ಬೀದರ್ ಜಿಲ್ಲಾ ಸಮಿತಿ ಸದಸ್ಯರಾದ ಪ್ರಭು ಸಂತೋಷಕರ್, ಗೌಸೋದ್ದಿನ್ ಹಾಗೂ ಶಶಿಕಾಂತ್ ಡಾಂಗೆ ಇದ್ದರು.