ಬಸವಕಲ್ಯಾಣ: ಕಲ್ಯಾಣ ಕ್ರಾಂತಿಯಲ್ಲಿ ಎಳೆಹೂಟೆ ಶಿಕ್ಷೆಗೆ ಒಳಗಾಗಿ ಪ್ರಾಣತ್ಯಾಗ ಮಾಡಿದ ಶರಣ ಹರಳಯ್ಯ, ಮಧುವರಸ, ಕಲ್ಯಾಣಮ್ಮ, ಲಾವಣ್ಯ ಹಾಗೂ ಶೀಲವಂತರ ಸ್ಮರಣಾರ್ಥವಾಗಿ ನಗರದಲ್ಲಿ ಬೃಹತ್ ಹುತಾತ್ಮ ಸ್ಮಾರಕ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದರು.

ನಗರದ ಹರಳಯ್ಯ ಗವಿಯಲ್ಲಿ ಬುಧವಾರ ಸಂಜೆ ನಡೆದ ಶರಣ ವಿಜಯೋತ್ಸವ ಹಾಗೂ ಹುತಾತ್ಮ ದಿನಾಚರಣೆಯ ನಾಲ್ಕನೇ ದಿನದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು 2011ರಲ್ಲಿ 50 ಸಾವಿರ ಜನರನ್ನು ಸೇರಿಸಿ ಬೃಹತ್ ಹುತಾತ್ಮ ಸಂಸ್ಮರಣೋತ್ಸವ ಆಯೋಜಿಸಿದ್ದರು. ಆ ಸಂದರ್ಭದಲ್ಲಿ ಅವರು ಹುತಾತ್ಮ ಸ್ಮಾರಕ ನಿರ್ಮಿಸುವ ಯೋಜನೆ ರೂಪಿಸಿದ್ದರು. ಆದರೆ, ಅವರ ಕನಸು ನನಸಾಗಿರಲಿಲ್ಲ. ಇದೀಗ ಆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರತಿವರ್ಷ ಬಸವ ಉತ್ಸವ ಆಯೋಜಿಸುವ ಸಂಬಂಧವೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಬಸವತತ್ವಕ್ಕೆ ತದ್ವಿರುದ್ಧವಾದ ಸಂಗತಿಗಳು ನಡೆಯುತ್ತಿವೆ. ಬರೀ ಮಾತನಾಡುವವರ ಸಂಖ್ಯೆ ಹೆಚ್ಚಾಗಿದ್ದು, ತತ್ವದಂತೆ ನಡೆಯುವವರು ಹಾಗೂ ಆತ್ಮಾವಲೋಕನ ಮಾಡಿಕೊಳ್ಳುವವರು ಕಡಿಮೆಯಾಗಿದ್ದಾರೆ. ನಾವೇ ಬದಲಾಗದಿದ್ದರೆ ಉಪದೇಶ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದರೆ, ಶರಣರು ತಾವು ನಂಬಿದ ತತ್ವಕ್ಕಾಗಿ ಯಾರ ಮುಂದೆಯೂ ಬಗ್ಗಲಿಲ್ಲ, ಯಾರಿಗೂ ಹೆದರಲಿಲ್ಲ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಅಕ್ಕ ಗಂಗಾಂಬಿಕಾ, ಭಾಲ್ಕಿಯ ಗುರುಬಸವ ಪಟ್ಟದೇವರು, ಆನಂದ್ ದೇವಪ್ಪ ಹಾಗೂ ಶಶಿಕಾಂತ್ ದುರ್ಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor