ದೇವದುರ್ಗ | ಹೋಟೆಲ್‌ಗೆ ಆಕಸ್ಮಿಕ ಬೆಂಕಿ; ತಪ್ಪಿದ ಭಾರೀ ಅನಾಹುತ
ದೇವದುರ್ಗ : ಪಟ್ಟಣದ ಜಾಲಹಳ್ಳಿ ರಸ್ತೆಯ ಬಂಡೆಗುಡ್ಡ ಪೆಟ್ರೋಲ್ ಬಂಕ್ ಸಮೀಪ ಮಂಗಳವಾರ ರಾತ್ರಿ ಸುಮಾರು 8.50ಕ್ಕೆ ನಾಗರಾಜ್ ಕೊಳ್ಳಿ ಅವರ ಹೋಟೆಲ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಹೋಟೆಲ್ ಒಳಗೆ ಗ್ಯಾಸ್ ಸಿಲಿಂಡರ್ ಇದ್ದ ಕಾರಣ ಭಾರೀ ಅನಾಹುತ ಸಂಭವಿಸುವ ಭೀತಿ ಎದುರಾಗಿತ್ತು. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಹರಸಾಹಸಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಅನಾಹುತ ಸಂಭವಿಸಿಲ್ಲ. ಆದರೆ ಬೆಂಕಿಯಿಂದ ಹೋಟೆಲ್‌ಗೆ ಹಾನಿಯಾಗಿದ್ದು, ಜೀವನೋಪಾಯಕ್ಕಾಗಿ ಹೋಟೆಲ್ ನಡೆಸುತ್ತಿದ್ದ ನಾಗರಾಜ್ ಕೊಳ್ಳಿ ಅವರಿಗೆ ಆರ್ಥಿಕ ನಷ್ಟ ಉಂಟಾಗಿದೆ.
ಸಂತ್ರಸ್ತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಘಟನಾ ಸ್ಥಳದಲ್ಲಿ ಪ್ರಮುಖ ಅಗ್ನಿಶಾಮಕ ಅಧಿಕಾರಿ ಈರಪ್ಪ, ಸಿಬ್ಬಂದಿಗಳಾದ ಹನುಮಂತ, ರವಿ, ಶಿವರಾಜ, ಶಿವಾನಂದ ಹೂಗಾರ, ಸಂತೋಷ, ನವಾಜ್, ಖಾಜಾ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.