ಔರಾದ್, ಕಮಲನಗರ ತಾಲೂಕುಗಳನ್ನು ಬರಗಾಲ ಪಟ್ಟಿಗೆ ಸೇರಿಸಲು ಆಗ್ರಹಿಸಿ ರೈತರಿಂದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ಔರಾದ್ : ಕಮಲನಗರ ಹಾಗೂ ಔರಾದ್ ಎರಡೂ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಪಟ್ಟಣದ ಎಪಿಎಂಸಿ ವೃತ್ತದಲ್ಲಿ ಬೀದರ್–ನಾಂದೇಡ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ತಹಶೀಲ್ದಾರ್ ಮಹೇಶ್ ಪಾಟೀಲ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಮುಂಗಾರು ಹಂಗಾಮು ಆರಂಭವಾದ ದಿನದಿಂದ ಇಲ್ಲಿಯವರೆಗೆ ವಾಡಿಕೆಯಷ್ಟು ಮಳೆಯಾಗದ ಕಾರಣ ಬೆಳೆಗಳು ಒಣಗುತ್ತಿವೆ ಎಂದು ದೂರಿದರು.
ಆಗಸ್ಟ್ ಮೊದಲ ವಾರದಲ್ಲಿ ಬಿತ್ತನೆಯಾದ ಬೆಳೆಗಳೂ ಮಳೆ ಕೊರತೆಯಿಂದ ಒಣಗುತ್ತಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರ್ಕಾರ ಕೂಡಲೇ ಕಮಲನಗರ ಮತ್ತು ಔರಾದ್ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಪ್ರತಿ ಎಕರೆಗೆ ಬರ ಪರಿಹಾರ ನೀಡುವುದರ ಜೊತೆಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ರೈತ ಸಂಘ ಆಗ್ರಹಿಸಿದೆ.
ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತರು ಜಾನುವಾರು ಹಾಗೂ ಎತ್ತಿನ ಬಂಡಿಗಳೊಂದಿಗೆ ರಸ್ತೆಗಿಳಿದು ಉಗ್ರ ಹೋರಾಟ ನಡೆಸಲಾಗುವುದು. ಯಾವುದೇ ಅಹಿತಕರ ಘಟನೆಗಳಿಗೆ ಸರ್ಕಾರವೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ್ ಬಿರಾದಾರ್, ಔರಾದ್ ತಾಲೂಕಾಧ್ಯಕ್ಷ ಪ್ರಕಾಶ್ ಬಾವಗೆ, ಪ್ರಧಾನ ಕಾರ್ಯದರ್ಶಿ ಸಂಜೀವ್ ರೆಡ್ಡಿ, ಗೌರವಾಧ್ಯಕ್ಷ ಸತ್ಯವಾನ್ ಪಾಟೀಲ್, ಬಾಬುರಾವ್ ಬಿರಾದಾರ್, ವಿಠ್ಠಲರಾವ್ ಪಾಟೀಲ್, ಕಲ್ಲಪ್ಪ ದೇಶಮುಖ್, ಝರಣಪ್ಪಾ ದೇಶಮುಖ್, ಹಣಮಂತ್ ಬಿರಾದಾರ್, ವಿಜಯಕುಮಾರ್ ಶೇಟಕಾರ್, ರಾಜಹಂಸ್ ಶೇಟಕಾರ್, ಶಿವಾನಂದ್ ಹಂಗರಗೆ, ಗೊವಿಂದ್ ಇಂಗಳೆ, ಪ್ರಶಾಂತ್ ಖಾನಾಪುರೆ, ಗೊವಿಂದ್ ಲೋಣೆ ಹಾಗೂ ಭಾಗ್ಯಶ್ರೀ ದೇಶಮುಖ ಸೇರಿದಂತೆ ತಾಲೂಕಿನ ರೈತರು ಉಪಸ್ಥಿತರಿದ್ದರು.