ಔರಾದ್ | ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ: ಎಂ.ಡಿ.ಶಕೀಲ್
ಔರಾದ್: ಸರ್ಕಾರವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಜಾ ಸೇವೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಬೀದರ್ ಸಹಾಯಕ ಆಯುಕ್ತ ಎಂ.ಡಿ. ಶಕೀಲ್ ಹೇಳಿದರು.
ತಾಲೂಕಿನ ಸಂತಪುರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ನಡೆದ ಪ್ರಜಾ ಸೇವೆ ಆಂದೋಲನಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ತಹಶೀಲ್ದಾರ್ ಮಹೇಶ್ ಪಾಟೀಲ್ ಮಾತನಾಡಿ, ಜನಸಾಮಾನ್ಯರ ಕಷ್ಟ-ಸುಖಗಳನ್ನು ಆಲಿಸಲು ಪ್ರಜಾ ಸೇವೆ ಆಂದೋಲನ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯ, ಶಿಕ್ಷಣ, ಅರಣ್ಯ, ಪೊಲೀಸ್, ಪಂಚಾಯತ್ ರಾಜ್, ಗ್ರಾಮ ಪಂಚಾಯಿತಿ ಹಾಗೂ ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕರಿಂದ ಒಟ್ಟು 87 ಅಹವಾಲುಗಳನ್ನು ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಇಒ ಕಿರಣ್ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ಸಂಗಯ್ಯ ಸ್ವಾಮಿ, ಬಿಇಒ ಪ್ರಕಾಶ್ ರಾಠೋಡ್, ಟಿಎಚ್‌ಒ ಡಾ. ಅನೀಲಕುಮಾರ್ ಎಕಲೂರೆ, ಪಪಂ ಮುಖ್ಯಾಧಿಕಾರಿ ರವಿ ಸುಕುಮಾರ್, ಆರ್‌ಎಫ್ಓ ಉಮಾ, ಗಜಾನಂದ್, ಡಿಆರ್‌ಎಫ್‌ಒ ವೈಜಿನಾಥ್, ಕಂದಾಯ ನೀರಿಕ್ಷಕ ಶಿವರಾಜ್ ಪಾಟೀಲ್, ಗುರುನಾಥ್ ಬಿರಾದರ್, ಅಮೀದ್ ಅಲಿ, ಪಂಡಿತ್ ಶಿಂಧೆ, ಸಲಾವೊದ್ದಿನ್, ಧನರಾಜ್ ಮುಸ್ತಾಪೂರೆ, ತುಕಾರಾಮ್ ಹಸನ್ಮುಖಿ ಹಾಗೂ ಸಂಜು ಲಾಧಾ ಸೇರಿದಂತೆ ಇತರರು ಇದ್ದರು. ದ್ವೀತಿಯ ದರ್ಜೆ ಸಹಾಯಕ ಓಂಕಾರ್ ನಿರೂಪಣೆ ಮಾಡಿದರು. ಗ್ರಾಮಾಡಳಿತಾಧಿಕಾರಿ ಪಂಡಿತ್ ಶಿಂಧೆ ವಂದಿಸಿದರು.