Bidar | ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಗುಣಮಟ್ಟದ ಔಷಧಿ ನೀಡಲು ಆಗ್ರಹಿಸಿ ಮನವಿ
ಬೀದರ್ : ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ, ಗುಣಮಟ್ಟದ ಔಷಧಿಗಳನ್ನು ನೀಡಲಾಗುತ್ತಿಲ್ಲ ಎಂಬ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಸೋಮವಾರ ಮನವಿ ಸಲ್ಲಿಸಿದೆ.
ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ, ಬೀದರ್ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಮತ್ತು ವಿವಿಧ ತಾಲೂಕುಗಳಿಂದ ಪ್ರತಿದಿನ ಸಾವಿರಾರು ಬಡ ರೋಗಿಗಳು ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಆದರೆ ಅವರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಆರೋಪಿಸಲಾಗಿದೆ.
ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದ್ದರೂ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಔಷಧಿಗಳನ್ನು ಖರೀದಿಸಲಾಗುತ್ತಿದೆ ಎಂಬ ಆರೋಪಗಳಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಆಸ್ಪತ್ರೆಯ ಸ್ವಚ್ಛತೆ ನಿರ್ವಹಣೆಯಲ್ಲಿಯೂ ನಿರ್ಲಕ್ಷ್ಯ ಕಂಡುಬರುತ್ತಿದ್ದು, ರೋಗಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದು ಕರವೇ ಆರೋಪಿಸಿದೆ.
ಸರ್ಕಾರದ ಅನುಮತಿ ಪಡೆಯದೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಸಬೇಕು. ಬ್ರಿಮ್ಸ್ ಆಡಳಿತದ ಕಾರ್ಯವೈಖರಿಯನ್ನು ಪರಿಶೀಲಿಸಿ ಆರೋಪಗಳು ಸಾಬೀತಾದರೆ ಸಂಬಂಧಿಸಿದ ನಿರ್ದೇಶಕರು, ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಕುರಿತು ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬ್ರಿಮ್ಸ್ ಆಸ್ಪತ್ರೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಜಿಲ್ಲಾ ಕಾರ್ಯಾಧ್ಯಕ್ಷ ಜಗನ್ನಾಥ್ ಕೌಠಾ, ಜಿಲ್ಲಾ ಸಂಚಾಲಕ ಬಸವರಾಜ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಚಂದ್ರಕಾಂತ್ ಪೋಳ, ಬೀದರ್ ದಕ್ಷಿಣ ತಾಲೂಕು ಅಧ್ಯಕ್ಷ ನಿಲೇಶ್ ಠಾಠೋಡ್, ಜಿಲ್ಲಾ ಸಹ ಕಾರ್ಯದರ್ಶಿ ಮೊಜೆಸ್ ಅಣದೂರಕರ್, ಮೈಕಲ್ ಕಡ್ಯಾಳ, ಅಶೋಕ್ ಕಡ್ಯಾಳ, ದಿನೇಶ್ ಕಮಠಾಣ, ರಾಜು ಮೇಲದೊಡ್ಡಿ, ಜಾನ್ ಕಮಠಾಣ, ಪಿಂಟು ಸಿರ್ಸಿ, ಪ್ರಸಾದ್ ಘೋಡಂಪಳಿಕರ್, ಗಿರೀಶ್ ಓಂಕಾರ್, ಅಬ್ದುಲ್ ರಹೀಮ್, ಧನರಾಜ ಚಿಟ್ಟಾವಾಡಿ ಸೇರಿದಂತೆ ಇತರರು ಇದ್ದರು.