ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ : ಬೀದರ್ ನಲ್ಲಿ ವಿಜಯೋತ್ಸವ

Update: 2026-07-25 20:07 IST

ಬೀದರ್ : ವಿದ್ಯಾರ್ಥಿಗಳ ಹಾಗೂ ಯುವಜನತೆಯ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ರಾಜೀನಾಮೆ ನೀಡಿದಕ್ಕಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ವಿಜಯೋತ್ಸವ ಆಚರಿಸಲಾಯಿತು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ದೇಶ ವ್ಯಾಪ್ತಿ ನಡೆದ ವಿದ್ಯಾರ್ಥಿಗಳ, ಯುವಕರ, ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಮಣಿದು ವಿಶೇಷವಾಗಿ ಕಾಕ್ರೋಜ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸಾಮಾಜಿಕ ಹೋರಾಟಗಾರ ಸೋನ್ಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜಿನಾಮೆ ನೀಡಿದ ಪ್ರಯುಕ್ತ ಪ್ರಗತಿಪರ ಸಂಘನೆಗಳ ಒಕ್ಕೂಟ, ಜಾತ್ಯತೀತ ಪಕ್ಷಗಳ ವತಿಯಿಂದ ನಗರದ ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಲಾಯಿತು.

ಈ ವೇಳೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್)ದ ಕರ್ನಾಟಕ ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಅವರು ಮಾತನಾಡಿ, ಇಂದು ದೇಶದ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ವಿಧ್ಯಾರ್ಥಿ ಯುವಕರ ಗೆಲುವಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಎಷ್ಟೆ ದೊಡ್ಡ ವ್ಯಕ್ತಿಗಳಿದ್ದರೂ ಕೂಡ ತಪ್ಪು ಮಾಡಿದರೆ ಜನರು ಪಾಠ ಕಲಿಸುತ್ತಾರೆ. ಶಾಂತಿಯುತ ಹೋರಾಟದಿಂದ ಸ್ವಾತಂತ್ರ್ಯ ಚಳುವಳಿಯ ಹೋರಾಟ ನಮ್ಮ ಪೂರ್ವಜರು ಗೆದ್ದು ತೋರಿಸಿದ್ದಾರೆ. ಇಂತಹ ಜನ ವಿರೋಧಿ, ಸಂವಿಧಾನ ವಿರೋಧಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಪಡೆಯುವುದು ದೊಡ್ಡ ಕೆಲಸವಲ್ಲ ಎಂದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಅರುಣ್ ಪಟೇಲ್ ಅವರು ಮಾತನಾಡಿ, ಈ ದೇಶದಲ್ಲಿ ಬುದ್ಧ, ಬಸವ, ಶಾಹು, ಫುಲೆ, ಅಂಬೇಡ್ಕರ್, ಭಗತ್ ಸಿಂಗ್, ಸುಖದೇವ, ರಾಜಗುರು, ಸ್ವಾಮಿ ವಿವೇಕಾನಂದರ ಸಿದ್ದಾಂತ ಇದೆ. ಎಂತಹ ದುಷ್ಟ ಶಕ್ತಿ ಇದ್ದರೂ, ಸಂವಿಧಾನಕ್ಕೆ ತಲೆ ಬಾಗಲೆಬೇಕು ಎಂದು ಹೇಳಿದರು.

ಹಿರಿಯ ಮುಖಂಡ ವಿಠಲದಾಸ್ ಪ್ಯಾಗೆ ಅವರು ಮಾತನಾಡಿ, ಸಮಾನತೆ ಬಂಧುತ್ವ ಭಾವೈಕ್ಯ ಕೆಡಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿತ್ತು. ಆದರೆ, ವಿದ್ಯಾರ್ಥಿಗಳ ಸಂವಿಧಾನಿಕ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಿರುವುದು ಇತಿಹಾಸ ಪುಟದಲ್ಲಿ ಸಾಕ್ಷಿಯಾಗಿ ಉಳಿಯಲಿದೆ ಎಂದು ತಿಳಿಸಿದರು.

ಲಿಂಗಾಯತ ಯುವ ಮುಖಂಡ ಸಿದ್ರಾಮ್ ಶೆಟಕಾರ್ ಅವರು ಮಾತನಾಡಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಿಂದ ಪ್ರಜಾಪ್ರಭುತ್ವದ ಗೆಲುವಾಗಿದೆ. ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ನಿರಂತರ ಹೋರಾಟ ಮಾಡಲಾವುದು. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡಿದಾಗ ಮಾತ್ರ ಬದಲಾವಣೆ ಆಗಲು ಸಾಧ್ಯವೆಂದು ಜಂತರ್ ಮಂತರ್ ನಲ್ಲಿ ವಿಧ್ಯಾರ್ಥಿಗಳು, ಯುವಕರು ಮಾಡಿದ ಹೋರಾಟವೇ ಸಾಕ್ಷಿ ಎಂದು ನುಡಿದರು.

ಸಿಪಿಐ ಮುಖಂಡ ಬಾಬುರಾವ್ ಹೊನ್ನಾ ಅವರು ಮಾತನಾಡಿ, ಸಿಜೆಪಿ ಮುಖಂಡ ಅಭಿಜಿತ್ ದಿಪ್ಕೆ ಮತ್ತು ಸೋನಂ ವಾಂಗ್ಚುಕ್ ಅವರ ಹೋರಾಟಕ್ಕೆ ನಿರಂತರ ಗೇಲಿ ಮಾಡಿದ ಮೋದಿ ಅವರ ಸಚಿವ ಸಂಪುಟದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿ ಶರಣಾಗಿರುವ ಪ್ರಯುಕ್ತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಿಜಯೋತ್ಸವ ಮಾಡಲಾಯಿತು ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜಗದೀಶ್ವರ್ ಬಿರಾದಾರ್, ಮೊಹಮ್ಮದ್ ಶಫಿ, ಶ್ರೀಧರ್ ಸೊಮನೋರ್, ರಮೇಶ್ ಮಂದಕನಳ್ಳಿ, ಕಂಟೆಪ್ಪಾ ಪೂಜಾರಿ, ಸಂಜು ಬ್ಯಾಗಿ, ಗೌತಮ್ ಮುತ್ತಂಗಿಕರ್, ಬಸವ ಅಷ್ಟೂರ್, ಬಸವರಾಜ್ ಭಾವಿದೊಡ್ಡಿ, ದೀಪಕ್ ಮಾಳಗೆ, ತುಕಾರಾಮ್ ಯರನಳ್ಳಿ ಹಾಗೂ ಅರ್ಜುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News