CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಗೆ ಷರತ್ತುಬದ್ಧ ಜಾಮೀನು
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿಯಲ್ಲಿ ಮೆರವಣಿಗೆ; ಬಾಂಡ್ ಗೆ ಸಹಿ ಹಾಕಿದ ಬಳಿಕ ಬಿಡುಗಡೆ
Photo: PTI
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವಶಕ್ಕೆ ಪಡೆಯಲಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಪೀಸ್ ಬಾಂಡ್ ಗೆ ಸಹಿ ಹಾಕಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ದಿಲ್ಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ 'ಲೆಹ್ರಾ ದೋ ತಿರಂಗಾ' (ತ್ರಿವರ್ಣ ಧ್ವಜ ಹಾರಿಸಿ) ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶನಿವಾರ ಬಿಗಿ ಭದ್ರತೆಯ ನಡುವೆ ಅವರನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್ಇಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 126 ಮತ್ತು 170ರ ಅಡಿಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು ಮತ್ತು ವಕೀಲರನ್ನು ಭೇಟಿಯಾಗಲು ತಕ್ಷಣ ಅವಕಾಶ ನೀಡಿರಲಿಲ್ಲ ಎಂದು ಸಿಜೆಪಿ ಪ್ರತಿನಿಧಿಗಳು ಆರೋಪಿಸಿದ್ದಾರೆ.
ಪ್ರತಿಭಟನೆಗೆ ನಿರ್ಬಂಧ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ನಡೆದಿರಬಹುದಾದ ಅಕ್ರಮಗಳ ವಿರುದ್ಧ ಹಾಗೂ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೀಪ್ಕೆ ಪ್ರತಿಭಟನೆಗೆ ಕರೆ ನೀಡಿದ್ದರು. ಶುಕ್ರವಾರ ಸಂಜೆ 5 ಗಂಟೆಗೆ ಕನ್ನಾಟ್ ಪ್ಲೇಸ್ ನ ಸೆಂಟ್ರಲ್ ಪಾರ್ಕ್ ನಲ್ಲಿ ಸೇರಲು ಬೆಂಬಲಿಗರಿಗೆ ಸೂಚಿಸಿದ್ದರು.
ದಿಲ್ಲಿ ಪೊಲೀಸರು ದೀಪ್ಕೆ ಅವರಿಗೆ ಎರಡು ನೋಟಿಸ್ ಗಳನ್ನು ನೀಡಿದ್ದರು. ಮೊದಲ ನೋಟಿಸ್ ನಲ್ಲಿ ಬಿಎನ್ಎಸ್ಎಸ್ ಸೆಕ್ಷನ್ 163ರ ಅಡಿಯಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳನ್ನು ಉಲ್ಲೇಖಿಸಿ ಸೆಂಟ್ರಲ್ ಪಾರ್ಕ್ಗೆ ತೆರಳದಂತೆ ಸೂಚಿಸಲಾಗಿತ್ತು.
ನೈರುತ್ಯ ದಿಲ್ಲಿ ಪೊಲೀಸರು ನೀಡಿದ ಎರಡನೇ ನೋಟಿಸ್ನಲ್ಲಿ, ದೀಪ್ಕೆ ಮತ್ತು ಸಿಜೆಪಿ ನಾಯಕರಾದ ಅಶುತೋಷ್ ರಂಕಾ ಹಾಗೂ ಸೌರವ್ ದಾಸ್ ಅವರನ್ನು ಈ ಹಿಂದೆ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದ ಘಟನೆಯನ್ನು ಉಲ್ಲೇಖಿಸಲಾಗಿತ್ತು. ಒಂದು ವರ್ಷದವರೆಗೆ ಸಾರ್ವಜನಿಕ ಶಾಂತಿಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಬಾರದು ಎಂಬ ನ್ಯಾಯಾಲಯದ ನಿರ್ದೇಶನವನ್ನೂ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿತ್ತು.
ರಾಷ್ಟ್ರಧ್ವಜ ಹಿಡಿದ ಯುವಜನರನ್ನು ಕಂಡು ಸರಕಾರ ಭಯಗೊಂಡಿದೆ ಎಂದು ಆರೋಪಿಸಿರುವ ಸಿಜೆಪಿ, ದೀಪ್ಕೆ ಅವರ ಬಂಧನವನ್ನು ಟೀಕಿಸಿದೆ.
ಮಂಡಿ ಹೌಸ್ ನಲ್ಲೂ ಪ್ರತಿಭಟನೆ
ದಿಲ್ಲಿಯಲ್ಲಿ 'ಲೆಹ್ರಾ ದೋ ತಿರಂಗಾ' ಮೆರವಣಿಗೆ ನಡೆದರೆ, ಮಂಡಿ ಹೌಸ್ ಬಳಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಐಸಾ) ಮುಖ್ಯಸ್ಥೆ ನೇಹಾ ಬೋರಾ ಸೇರಿದಂತೆ AISA ಮತ್ತು ಎಡಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಬೋರಾ ಪ್ರತಿಭಟನೆಗೆ ಕರೆ ನೀಡಿದ್ದರು. ಜಂತರ್ ಮಂತರ್ ಅನ್ನು ಪ್ರತಿರೋಧದ ಸಂಕೇತವೆಂದು ಬಣ್ಣಿಸಿದ್ದ ಅವರು, ಮಧ್ಯ ದಿಲ್ಲಿಯು ಪ್ರತಿಭಟನೆಗಳ ಕೇಂದ್ರವಾಗಿದೆ ಎಂದು ಹೇಳಿದ್ದರು.
ಕನ್ನಾಟ್ ಪ್ಲೇಸ್ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಕ್ಷಿಪ್ರ ಕಾರ್ಯಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಕ್ಟೋಬರ್ 16 ಮತ್ತು 17ರಂದು ಸಾರ್ವಜನಿಕರಿಗೆ ಮುಚ್ಚಲಾಗಿದೆ ಎಂದು ಘೋಷಿಸಲಾಗಿದ್ದ ಸೆಂಟ್ರಲ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಹೊಸದಿಲ್ಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಅನುಮತಿ ನೀಡಿರಲಿಲ್ಲ.
ವ್ಯಕ್ತಿಗಳ ನಿರ್ದಿಷ್ಟ ಪಟ್ಟಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ದಿಲ್ಲಿ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್ಒ) ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ರಂಜನ್ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಛಾಯಾಚಿತ್ರಗಳು ಅಥವಾ ವಿಡಿಯೊಗಳನ್ನು ಅವರ ವೈಯಕ್ತಿಕ ಮಾಹಿತಿಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಗೌಪ್ಯತೆಯ ಉಲ್ಲಂಘನೆಯಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.
ರಾಷ್ಟ್ರಧ್ವಜ ಹಾರಿಸಲು ಎಎಪಿ ಸಿದ್ಧ
ಈ ನಡುವೆ, ದಿಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಧ್ಯಕ್ಷ ಸೌರಭ್ ಭಾರದ್ವಾಜ್ ಅವರು ಮಧ್ಯ ದಿಲ್ಲಿಯ ವಿವಿಧ ಸ್ಥಳಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ತಮ್ಮ ಪಕ್ಷ ಸಿದ್ಧವಿದೆ ಎಂದು ಹೇಳಿದ್ದಾರೆ. ತ್ರಿವರ್ಣ ಧ್ವಜ ಪ್ರದರ್ಶಿಸುವ ಜನರನ್ನು ಏಕೆ ವಿರೋಧಿಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.