ಸ್ಟಿಂಗ್ ಆಪರೇಷನ್; ಸಿಬಿಐ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಆಗ್ರಹ
► "ತಮ್ಮ ವಿರುದ್ಧ ಷಡ್ಯಂತ್ರದ ಬಗ್ಗೆ ಸಿದ್ದರಾಮಯ್ಯ ಗಟ್ಟಿ ದನಿ ಎತ್ತಲಿ" ► "ರಾಜಕೀಯ ವಿರೋಧಿಗಳು, ಶಾಸಕರು, ಸಚಿವರ ವಿರುದ್ಧ ಸದಾಶಿವನಗರದಲ್ಲಿ ಫೋನ್ ಟ್ಯಾಪಿಂಗ್ ಸೆಂಟರ್" ► "ಫೋನ್ ಟ್ಯಾಪಿಂಗ್ ಮಾಡಲು ನಿವೃತ್ತ ಪೊಲೀಸ್ ಅಧಿಕಾರಿಗಳ ನೇಮಕ"
ಬೆಂಗಳೂರು : ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್‌ಗಳ ಹೆಸರಿನಲ್ಲಿ ರಾಜಕೀಯ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆಗ್ರಹಿಸಿದರು.
ಅಲ್ಲದೆ, ಈ ಬಗ್ಗೆ ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಹಾಗೂ ಅವರಿಗೆ ದೂರನ್ನು ನೀಡುತ್ತೇನೆ ಎಂದು ಸಚಿವರು ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು, ಈ ಪ್ರಕರಣಗಳ ಹಿಂದೆ ಯಾರು ಇದ್ದಾರೆ? ಕಾರ್ಯಾಚರಣೆಗಳನ್ನು ಯಾರು ನಡೆಸಿದ್ದಾರೆ? ಯಾರ ಯಾರ ಪಾತ್ರವಿದೆ? ಎಂಬುದನ್ನು ತನಿಖೆಯಿಂದ ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು ಹಾಗೂ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆ ಅಗತ್ಯ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ನಡೆಸಿರುವ ಷಡ್ಯಂತ್ರಕ್ಕೆ ಹೆದರುವ ಅಗತ್ಯವಿಲ್ಲ. ಅವರು ಈಗಿನ ಸಿದ್ದರಾಮಯ್ಯ ಆಗಿರಬಾರದು. ಅವರು ಹಿಂದಿನ ಹೋರಾಟ ಮನೋಭಾವದ ಸಿದ್ಧರಾಮಯ್ಯ ಮಾತನಾಡಬೇಕು. ಇದರ ಬಗ್ಗೆ ಮೌನ ವಹಿಸುವುದು ಸರಿಯಲ್ಲ. ನಾನೊಬ್ಬನೇ ಮಾತನಾಡಿದರೆ ಸಾಕಾಗುವುದಿಲ್ಲ ಎಂದ ಅವರು ಹೇಳಿದರು.
ಹಿಂದೆ ಮಾಜಿ ಮುಖ್ಯಮಂತ್ರಿ ಒಬ್ಬರ ವಿರುದ್ಧ ಸ್ಟಿಂಗ್ ಮಾಡಿದರು, ಆಮೇಲೆ ರಮೇಶ್ ಜಾರಕಿಹೊಳಿ ಅವರನ್ನು ಮುಗಿಸಿದರು, ಅದಾದ ಮೇಲೆ ಅದೇ ಸಮುದಾಯದ ಕೆ.ಎನ್.ರಾಜಣ್ಣ ಅವರನ್ನು ತೆಗೆದರು. ನಮ್ಮ ಪಕ್ಷದ ನಾಯಕನೇ ಸಿಡಿ ಪ್ಯಾಕ್ಟರಿ ನಡೆಸುತ್ತಿದ್ದಾನೆ ಎಂದು ರಾಜಣ್ಣ ಹೇಳಿದರೂ ಆಮೇಲೆ ಅವರ ಬಾಯಿ ಮುಚ್ಚಿಸಿದರು. ಈಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ ಎಂದು ಸಚಿವರು ಹೇಳಿದರು.
ಸದಾಶಿವನಗರದಲ್ಲಿ ಪೋನ್ ಟ್ಯಾಫಿಂಗ್ ನಿಗಾ ಇಡಲು ನಿವೃತ್ತ ಪೊಲೀಸ್ ಅಧಿಕಾರಿಗಳ ನೇಮಕ:
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಸದಾಶಿವನಗರದ ಮನೆಯಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು, ಅತ್ಯಾಧುನಿಕ ಉಪಕರಣಗಳ ಮೂಲಕ ಸಚಿವರು ಹಾಗೂ ಇತರರು ಏನು ಚರ್ಚಿಸುತ್ತಾರೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ತಮಗೆ ಬಂದಿದೆ ಎಂದು ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಬಹಿರಂಗ ಮಾಡಿದರು.
ಸದಾಶಿವನಗರದಲ್ಲಿ ನಡೆಸಲಾಗುತ್ತಿರುವ ಫೋನ್ ಟ್ಯಾಪಿಂಗ್, ನಿಗಾ ವ್ಯವಸ್ಥೆಯ ಬಗ್ಗೆ ಪೊಲೀಸ್ ಇಲಾಖೆಯಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂಬ ಮಾಹಿತಿ ನನಗೆ ಬಂದಿದೆ ಎಂದು ಹೇಳಿದ ಕೇಂದ್ರ ಸಚಿವರು; ಸಿಎಂ ಆಗಿರುವ ವ್ಯಕ್ತಿ ತನ್ನ ಸ್ಥಾನ ಭದ್ರ ಮಾಡಿಕೊಳ್ಳಲು ಸ್ವಪಕ್ಷದ ಶಾಸಕರು, ಸಚಿವರ ಮೇಲೆಯೇ ನಿಗಾ ಇಟ್ಟರೆ ಕಥೆ ಏನು? ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಸಿಬಿಐ ತನಿಖೆ ಅಗತ್ಯ ಎಂದು ಹೇಳಿದರು.
ಸಚಿವರು ಮತ್ತು ರಾಜಕೀಯ ನಾಯಕರ ಫೋನ್‌ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂಬುದು ಗಂಭೀರ ವಿಷಯ. ಅವರ ಚಟುವಟಿಕೆಗಳನ್ನು ಗಮನಿಸಲು ಪ್ರತ್ಯೇಕ ವ್ಯವಸ್ಥೆ ಅಥವಾ ಘಟಕವಿದೆ ಎಂಬುದು ಅಘಾತಕಾರಿ ಸಂಗತಿ. ಆದರೆ ಮುಖ್ಯಮಂತ್ರಿ ಸ್ವತಃ ಇದಕ್ಕೆ ಆದೇಶಿಸಿದ್ದಾರೆ ಎಂದು ತಾನು ಹೇಳುತ್ತಿಲ್ಲ; ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತನಿಖೆಯಿಂದ ಪರಿಶೀಲಿಸಬೇಕು ಎಂದು ಸ್ಪಷ್ಟಪಡಿಸಿದರು. ತಮ್ಮ ಫೋನ್ ಟ್ಯಾಪ್ ಆಗಿದೆಯೇ ಎಂಬ ಪ್ರಶ್ನೆಗೆ, ತಾವು ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುವುದರಿಂದ ಮರೆಮಾಚುವುದೇನೂ ಇಲ್ಲ ಎಂದು ಉತ್ತರಿಸಿದರು.
ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿರುವುದನ್ನೂ ಪ್ರಸ್ತಾಪಿಸಿದ ಕೇಂದ್ರ ಸಚಿವರು; ಯಾವುದೇ ವಿಚಾರದಲ್ಲಿ ತಪ್ಪಿದ್ದರೆ ಅಂತಿಮವಾಗಿ ಸಂವಿಧಾನಾತ್ಮಕ ಮತ್ತು ನ್ಯಾಯಾಂಗ ಸಂಸ್ಥೆಗಳ ಮೂಲಕ ಸತ್ಯ ಹೊರಬರಬೇಕು. ನ್ಯಾಯಾಲಯದ ತೀರ್ಪಿಗೆ ತಲೆಬಾಗಬೇಕು ಎಂಬುದು ತಮ್ಮ ನಿಲುವು. ತಮ್ಮ ಕುಟುಂಬ ಕೂಡ ಇಂಥ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಈ ರಕ್ಷಣೆ ಪಡೆಯಲು ನ್ಯಾಯಾಲಯದ ಮೊರೆ ಹೋಗಿಲ್ಲ ಎಂದು ಅವರು ತಿಳಿಸಿದರು.
2024ರ ಲೋಕಸಭಾ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಮಂಡ್ಯ ಮತ್ತು ಹಾಸನ ಭಾಗಗಳಲ್ಲಿ ವಿಡಿಯೊಗಳನ್ನು ಪೆನ್‌ಡ್ರೈವ್‌ಗಳಲ್ಲಿ ಹಂಚಲಾಗಿದೆ ಎಂದು ಹೇಳಿದ ಕುಮಾರಸ್ವಾಮಿ ಅವರು; ವಿಡಿಯೋಗಳಲ್ಲಿ ಇದ್ದ ಮಹಿಳೆಯರ ಮುಖಗಳನ್ನು ಮರೆಮಾಚಲಿಲ್ಲ. ಲೋಕಸಭೆಯ ಇವತ್ತಿನ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಆ ನಾನೂರು ಜನ ಮಹಿಳೆಯರಲ್ಲಿ ಎಷ್ಟು ಜನ ಬಂದು ಕೇಸು ದಾಖಲು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಪೆನ್‌ಡ್ರೈವ್‌ಗಳಲ್ಲಿ ಹಲವು ಮಹಿಳೆಯರ ವಿಡಿಯೊಗಳನ್ನು ಹಂಚಿ ಅವರ ಕುಟುಂಬಗಳ ಗೌರವಕ್ಕೆ ಧಕ್ಕೆ ಉಂಟು ಮಾಡಿದರು. ವಿಡಿಯೊಗಳನ್ನು ಹೊರಕ್ಕೆ ಬಿಟ್ಟಾಗ ಆ ಮಹಿಳೆಯರ ಮುಖಗಳನ್ನು ಮಸುಕುಗೊಳಿಸಿ ಗೌಪ್ಯತೆ ಕಾಪಾಡಲಿಲ್ಲ. ಆ ವಿಡಿಯೊಗಳನ್ನು ಸಿದ್ಧಪಡಿಸಿ ಹಂಚಿದವರು ಯಾರು? ಯಾವ ಸ್ಥಳದಲ್ಲಿ ಸಿದ್ಧಪಡಿಸಲಾಯಿತು? ಅವುಗಳನ್ನು ಹಂಚಿದವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಯಿತು? ಅವರೆಲ್ಲರೂ ದಿನವೂ ಹಾಸನದಲ್ಲಿ ಡಾನ್ಸ್ ಮಾಡಿಕೊಂಡು ತಿರುಗುತ್ತಿದ್ದಾರೆ. ಇದಕ್ಕೆ ಈ ಸರಕಾರ ಉತ್ತರ ಕೊಡಬೇಕು ಎಂದು ಸಚಿವರು ಒತ್ತಾಯಿಸಿದರು.
ತಮ್ಮ ಕುಟುಂಬದ ಬಗ್ಗೆ, ನಮ್ಮ ತಾಯಿಯ ವಿರುದ್ಧವೂ ಸುದ್ದಿಗಳನ್ನು ಪ್ರಸಾರ ಮಾಡಲಾಯಿತು. ಕುಟುಂಬದವರು ಹಲವು ರೀತಿಯ ನಿಂದನೆಗಳನ್ನು ಎದುರಿಸಿದ್ದಾರೆ. ಅದಾಗ್ಯೂ ನಾವು ಯಾರೂ ಕೋರ್ಟ್ ಮೊರೆ ಹೋಗಿ ರಕ್ಷಣೆ ಪಡೆಯಲು ಹೋಗಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಾನು ಈ ವ್ಯಕ್ತಿಯನ್ನು ಇಂದಿಗೂ ಮುಖ್ಯಮಂತ್ರಿ ಎಂದು ಹೇಳಲು ಸಿದ್ಧನಿಲ್ಲ, ನಮ್ಮ ರಾಜ್ಯಕ್ಕೆ ಇಂತಹ ಸ್ಥಿತಿ ಬರಬಾರದಾಗಿತ್ತು ಎಂದ ಸಚಿವರು; ನನ್ನ ತಾಯಿಯನ್ನೂ ಬಿಡಲಿಲ್ಲ ಇವರು. ದಿನವೂ ದೇವರ ಕೋಣೆಯಲ್ಲಿ ಬದುಕಿದವರು ನನ್ನ ತಾಯಿ, ಅವರ ಬಗ್ಗೆಯೂ ಸರಣಿ ಕಥೆಗಳನ್ನು ಸೃಷ್ಟಿಸಿದಿರಿ, ಈ ರೀತಿಯ ವಾತಾವರಣ ನಿರ್ಮಾಣ ಮಾಡಿರುವ ವ್ಯಕ್ತಿಯ ನಿರಂತರ ಕಸುಬೇ ಅಂತಹದ್ದು ಎಂದು ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಕೇಂದ್ರ ಸಚಿವರು ಹರಿಹಾಯ್ದರು.
ಸುದೀರ್ಘ ಕಾಲ ಆಡಳಿತ ನಡೆಸಿದ ಅನುಭವವಿರುವ ಸಿದ್ದರಾಮಯ್ಯ ಅವರು ಕೋರ್ಟ್‌ಗಳಿಂದ ತಡೆಯಾಜ್ಞೆ ಪಡೆಯುವ ಬದಲು ದಿಟ್ಟವಾಗಿ ನಿಲ್ಲಬೇಕು. ಅಹಿಂದ ನಾಯಕರು ಇಂತಹ ಕೆಟ್ಟ ಬೆಳವಣಿಗೆಗಳನ್ನು ವಿರೋಧಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಹೀಗಾಗಿ, ಹೋರಾಟ ಮಾಡಿ, ಉನ್ನತ ತನಿಖೆ ನಡೆಸಿ ಎಂದು ಸಚಿವರು ಕರೆ ನೀಡಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿರುವುದನ್ನು ತಾವು ಟೀಕಿಸಿಲ್ಲ ಎಂದು ಹೇಳಿದ ಅವರು; ಅದೇ ರೀತಿಯ ಗಂಭೀರತೆ ಇತರ ಪ್ರಕರಣಗಳಲ್ಲಿಯೂ ಇರಬೇಕು ಎಂದರು.
ಸಿದ್ದರಾಮಯ್ಯ ಅವರಿಗೆ ಹೆಚ್ಡಿಕೆ ಮನವಿ:
ಯಾವುದೇ ಕಾರಣಕ್ಕೂ ಈ ಕುತಂತ್ರಕ್ಕೆ ನೀವು ಹೆದರಬಾರದು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಸಚಿವ ಕುಮಾರಸ್ವಾಮಿ ಅವರು; ನೀವು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಮೀರಿದ ನಾಯಕ ನೀವು. ಇಂತಹ ಹಿನ್ನೆಲೆ ಹೊಂದಿರುವ ನೀವು ನಿಮ್ಮ ವಿರುದ್ಧ ನಿಮ್ಮ ಪಕ್ಷದಲ್ಲಿ ನಡೆದಿರುವ ಸಂಚಿಗೆ ಹೆದುರುವ ಅಗತ್ಯವಿಲ್ಲ. ನಿಮಗೆ ಕಳಂಕ ಬರಲು ಬಿಡುವುದಿಲ್ಲ. ನೀವು ನ್ಯಾಯಾಲಯದ ಮೊರೆ ಹೋಗುವ ಸ್ಥಿತಿಗೆ ಏಕೆ ತಳ್ಳಲ್ಪಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರ ವಿರುದ್ಧ ತಾನು ಹಿಂದೆ ರಾಜಕೀಯವಾಗಿ ಹೋರಾಡಿದ್ದೇನೆ, ವಿಧಾನಸಭೆಯಲ್ಲಿ ಅವರ ಜತೆ ವಾಗ್ವಾದಗಳೂ ನಡೆದಿವೆ ಎಂದ ಸಚಿವರು; ಈಗ ನಾನು ಅವರ ಮೇಲೆ ಅನುಕಂಪದಿಂದ ಮಾತನಾಡುತ್ತಿಲ್ಲ. ಆದರೆ, ಅವರ ವಿರುದ್ಧ ನಡೆದಿರುವ ಷಡ್ಯಂತ್ರ ದ ಬಗ್ಗೆ ಮಾತ್ರ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರು ಸ್ಟಿಂಗ್ ಆಪರೇಷನ್‌ಗಳ ವಿರುದ್ಧ ತಮ್ಮ ಹಿಂದಿನ ಗಟ್ಟಿಯಾದ ದನಿಯಲ್ಲಿ ಮಾತನಾಡಿ ಇಂತಹ ಪ್ರವೃತ್ತಿಗೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದರು.