ವಿಂಡೀಸ್ ಉಳಿಸಿದ ʼಹೋಪ್ʼ; ಭಾರತದ ವಿರುದ್ಧ ಸರಣಿ ಸಮಬಲ!
ಕೀಮೋ ಪಾಲ್ ಗೆ ಐದು ವಿಕೆಟ್; 24 ರನ್ ಗಳಿಂದ ವೆಸ್ಟ್ ಇಂಡೀಸ್ ಗೆ ಜಯ
Photo Credit : PTI
ಹೈದರಾಬಾದ್: ನಾಯಕ ಶಾಯ್ ಹೋಪ್ ಅವರ ಅಜೇಯ ಶತಕ ಹಾಗೂ ಕೀಮೋ ಪಾಲ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ, ನಾಲ್ಕನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 24 ರನ್ ಗಳಿಂದ ಸೋಲನುಭವಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿ 2–2ರಲ್ಲಿ ಸಮಬಲಗೊಂಡಿದ್ದು, ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಸರಣಿ ಗೆಲ್ಲುವ ತಂಡ ನಿರ್ಧಾರವಾಗಲಿದೆ.
ಬುಧವಾರ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್, ನಾಯಕ ಹೋಪ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 3 ವಿಕೆಟ್ ಗಳಿಗೆ 247 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಹೋಪ್ 50 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿದರೆ, ಶೆರ್ಫೇನ್ ರುದರ್ಫೋರ್ಡ್ ಅಜೇಯ 49 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.
►ಸ್ಯಾಮ್ಸನ್ ಸ್ಫೋಟಕ ಆಟ ವ್ಯರ್ಥ
ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಸಂಜು ಸ್ಯಾಮ್ಸನ್ ಸ್ಫೋಟಕ ಆರಂಭ ನೀಡಿದರು. ಕೇವಲ 23 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಗಳ ನೆರವಿನಿಂದ 56 ರನ್ ಗಳಿಸಿ ಗಮನ ಸೆಳೆದರು. ಅಭಿಷೇಕ್ ಶರ್ಮಾ 29 ರನ್ ಗಳಿಸಿದರು.
ಬಳಿಕ ತಿಲಕ್ ವರ್ಮಾ 25 ಎಸೆತಗಳಲ್ಲಿ 43 ರನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 20 ಎಸೆತಗಳಲ್ಲಿ 41 ರನ್ ಗಳಿಸಿ ಗೆಲುವಿನ ಆಸೆ ಜೀವಂತವಾಗಿಟ್ಟರು. ಆದರೆ, ನಿರ್ಣಾಯಕ ಹಂತದಲ್ಲಿ ವಿಕೆಟ್ ಗಳು ಉರುಳಿದ ಕಾರಣ ಭಾರತದ ರನ್ ಚೇಸ್ ಗೆ ಹಿನ್ನಡೆಯಾಯಿತು. ಅಂತಿಮವಾಗಿ ತಂಡ 19.3 ಓವರ್ ಗಳಲ್ಲಿ ಅರ್ಷದೀಪ್ ಸಿಂಗ್ ರಿಟೈರ್ಡ್ ಔಟ್ ಆಗುವುದರೊಂದಿಗೆ 223 ರನ್ ಗಳಿಗೆ ಆಲೌಟ್ ಆಯಿತು.
ವೆಸ್ಟ್ ಇಂಡೀಸ್ ಪರ ಕೀಮೋ ಪಾಲ್ 41 ರನ್ ನೀಡಿ ಐದು ವಿಕೆಟ್ ಕಬಳಿಸಿ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಗುಡಾಕೇಶ್ ಮೋಟಿ 13 ರನ್ ನೀಡಿ ಎರಡು ವಿಕೆಟ್ ಪಡೆದರೆ, ರೊಮಾರಿಯೊ ಶೆಫರ್ಡ್ ಮತ್ತು ಶಮಾರ್ ಸ್ಪ್ರಿಂಗರ್ ತಲಾ ಒಂದು ವಿಕೆಟ್ ಪಡೆದರು.
►ಅರ್ಷದೀಪ್ಗೆ ಗಾಯದ ಆತಂಕ
ಪಂದ್ಯದ ಅಂತಿಮ ಹಂತದಲ್ಲಿ ಭಾರತದ ವೇಗಿ ಅರ್ಷದೀಪ್ ಸಿಂಗ್ ಎಡ ಭುಜದ ನೋವಿನಿಂದ ಬಳಲಿದರು. ಇನ್ನು ಮೂರು ಎಸೆತ ಬಾಕಿಯಿರುವಂತೆ ನೋವಿನ ಕಾರಣ ಆಟ ಮುಂದುವರಿಸಲಾಗದೆ ರಿಟೈರ್ಡ್ ಔಟ್ ಆಗಿ ಮೈದಾನ ತೊರೆದರು. ಅವರು ಮೈದಾನದಲ್ಲಿ ಕುಳಿತು ಭುಜವನ್ನು ಹಿಡಿದುಕೊಂಡಿದ್ದಾಗ ಅಂಪೈರ್ ನಿತಿನ್ ಮೆನನ್ ಆರೋಗ್ಯ ಪರಿಶೀಲಿಸಿದರು. ಭಾರತೀಯ ತಂಡದ ಡಗ್ ಔಟ್ ನಿಂದ ಶ್ರೇಯಸ್ ಅಯ್ಯರ್ ಅವರಿಗೆ ಮೈದಾನದಿಂದ ಹೊರಬರುವಂತೆ ಸೂಚನೆ ನೀಡಿದರು.
ಅರ್ಷದೀಪ್ ಅವರ ಗಾಯದ ಗಂಭೀರತೆ ಇನ್ನೂ ಸ್ಪಷ್ಟವಾಗಿಲ್ಲ. ಬೆಂಗಳೂರಿನಲ್ಲಿ ನಡೆಯಲಿರುವ ಸರಣಿ ನಿರ್ಣಾಯಕ ಪಂದ್ಯಕ್ಕೆ ಅವರು ಲಭ್ಯರಾಗಲಿದ್ದಾರೆಯೇ ಎಂಬ ಆತಂಕ ಕಾಡುತ್ತಿದೆ. ಈಗಾಗಲೇ ಒತ್ತಡ ಎದುರಿಸುತ್ತಿರುವ ಭಾರತದ ಬೌಲಿಂಗ್ ವಿಭಾಗಕ್ಕೆ ಅವರ ಅಲಭ್ಯತೆ ಮತ್ತೊಂದು ಹಿನ್ನಡೆಯಾಗಬಹುದು.
ಮೊದಲ ಹಾಗೂ ಮೂರನೇ ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, ಎರಡನೇ ಮತ್ತು ನಾಲ್ಕನೇ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಜಯ ಸಾಧಿಸಿದೆ. ಹೀಗಾಗಿ ಸರಣಿ 2–2ರಲ್ಲಿ ಸಮಬಲಗೊಂಡಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಐದನೇ ಪಂದ್ಯದಲ್ಲಿ ಟ್ರೋಫಿ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಿದೆ.