ಕೊನೆಗೂ ಈ ಸಲ ಕಪ್ ಆರ್‌ಸಿಬಿಯದ್ದೇ!
ಐಪಿಎಲ್ ಚಾಂಪಿಯನ್ ಆದ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮ | PHOTO:x/@ipl
ಅಹಮದಾಬಾದ್: ಸಂಘಟಿತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಅಂತರದಿಂದ ರೋಚಕವಾಗಿ ಮಣಿಸಿತು. ಈ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಮಂಗಳವಾರ ಟಾಸ್ ಜಯಿಸಿದ ಪಂಜಾಬ್ ಕ್ರಿಕೆಟ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆರ್‌ಸಿಬಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ರಜತ್ ಪಾಟಿದಾರ್ ಬಳಗವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸುವಲ್ಲಿ ಶಕ್ತವಾಯಿತು. ವೇಗದ ಬೌಲರ್ ಕೈಲ್ ಜಮೀಸನ್(3-48) ಹಾಗೂ ಅರ್ಷದೀಪ್ ಸಿಂಗ್(3-40) ತಲಾ 3 ವಿಕೆಟ್‌ಗಳನ್ನು ಉರುಳಿಸಿದರು.
ಗೆಲ್ಲಲು 191 ರನ್ ಗುರಿ ಪಡೆದ ಪಂಜಾಬ್ ತಂಡ ಸ್ಥಳೀಯ ಬೌಲರ್ ಕೃನಾಲ್ ಪಾಂಡ್ಯ(2-17) ನೇತೃತ್ವದಲ್ಲಿ ಆರ್‌ಸಿಬಿ ಬೌಲರ್‌ಗಳ ಕರಾರುವಾಕ್ ಬೌಲಿಂಗ್ ಗೆ ತತ್ತರಿಸಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿತು. ಐಪಿಎಲ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು.
ಪಂಜಾಬ್ ಪರ ಶಶಾಂಕ್ ಸಿಂಗ್(ಔಟಾಗದೆ 61, 30 ಎಸೆತ, 3 ಬೌಂಡರಿ, 6 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ವೇಗದ ಬೌಲರ್ ಅರ್ಷದೀಪ್ ಸಿಂಗ್ ಮೊದಲ 3 ಓವರ್‌ಗಳಲ್ಲಿ 37 ರನ್ ನೀಡಿದ ನಂತರ ಕೊನೆಯ ಓವರ್‌ನಲ್ಲಿ ಕೇವಲ 3 ರನ್ ನೀಡಿ 3 ವಿಕೆಟ್‌ಗಳನ್ನು ಉರುಳಿಸಿ ಆರ್‌ಸಿಬಿ ತಂಡವನ್ನು 200 ರನ್‌ನೊಳಗೆ ನಿಯಂತ್ರಿಸುವಲ್ಲಿ ನೆರವಾದರು.
ಆರ್‌ಸಿಬಿ ಪವರ್ ಪ್ಲೇನಲ್ಲಿ 1 ವಿಕೆಟ್‌ಗೆ 55 ರನ್, ಮಧ್ಯಮ ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 90 ರನ್ ಹಾಗೂ ಡೆತ್ ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿತು.
ಆರ್‌ಸಿಬಿ 2ನೇ ಓವರ್‌ನಲ್ಲಿ ಫಿಲ್ ಸಾಲ್ಟ್(16 ರನ್)ವಿಕೆಟ್ ಕಳೆದುಕೊಂಡು ನೀರಸ ಆರಂಭ ಪಡೆಯಿತು. ಆರ್‌ಸಿಬಿ ಪರ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಸರ್ವಾಧಿಕ ಸ್ಕೋರ್(43 ರನ್, 35 ಎಸೆತ, 3 ಬೌಂಡರಿ)ಗಳಿಸಿದರು.
ನಾಯಕ ರಜತ್ ಪಾಟಿದಾರ್(26 ರನ್, 16 ಎಸೆತ), ಲಿವಿಂಗ್‌ಸ್ಟೋನ್(25 ರನ್, 15 ಎಸೆತ), ಜಿತೇಶ್ ಶರ್ಮಾ(24 ರನ್, 10 ಎಸೆತ) ಹಾಗೂ ಮಯಾಂಕ್ ಅಗರ್ವಾಲ್(24 ರನ್, 18 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ 3ನೇ ವಿಕೆಟ್‌ಗೆ 27 ಎಸೆತಗಳಲ್ಲಿ 40 ರನ್ ಕಲೆ ಹಾಕಿದರು. ಇದು ಆರ್‌ಸಿಬಿ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ರನ್ ಜೊತೆಯಾಟವಾಗಿದೆ. ಕೊಹ್ಲಿ ಅವರು ಮಯಾಂಕ್ ಜೊತೆ 2ನೇ ವಿಕೆಟ್‌ಗೆ 38 ರನ್ ಹಾಗೂ ಲಿವಿಂಗ್‌ಸ್ಟೋನ್ ಅವರೊಂದಿಗೆ 4ನೇ ವಿಕೆಟ್‌ಗೆ 35 ರನ್ ಸೇರಿಸಿದ್ದರು.
ಪಂಜಾಬ್ ಕಿಂಗ್ಸ್ ಪರ ಜಮೀಸನ್(3-48) ಹಾಗೂ ಅರ್ಷದೀಪ್ ಸಿಂಗ್(3-40) ಯಶಸ್ವಿ ಬೌಲರ್ ಎನಿಸಿಕೊಂಡರು. ಅಝ್ಮತುಲ್ಲಾ ಉಮರ್‌ಝೈ(1-35), ವಿಜಯಕುಮಾರ್(1-30) ಹಾಗೂ ಯಜುವೇಂದ್ರ ಚಹಾಲ್(1-37) ತಲಾ ಒಂದು ವಿಕೆಟ್ ಪಡೆದರು.
►ಸಂಕ್ಷಿಪ್ತ ಸ್ಕೋರ್
ಆರ್‌ಸಿಬಿ: 20 ಓವರ್‌ಗಳಲ್ಲಿ 190/9
(ವಿರಾಟ್ ಕೊಹ್ಲಿ 43, ರಜತ್ ಪಾಟಿದಾರ್ 26, ಲಿವಿಂಗ್‌ಸ್ಟೋನ್ 25, ಮಯಾಂಕ್ 24, ಜಿತೇಶ್ ಶರ್ಮಾ 24, ಅರ್ಷದೀಪ್ ಸಿಂಗ್ 3-40, ಜಮೀಸನ್ 3-48)
ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 184/7
(ಶಶಾಂಕ್ ಸಿಂಗ್ ಔಟಾಗದೆ 61, ಜೋಶ್ ಇಂಗ್ಲಿಸ್ 39, ಪ್ರಭ್‌ಸಿಮ್ರನ್ ಸಿಂಗ್ 26, ಕೃನಾಲ್ ಪಾಂಡ್ಯ 2-17, ಭುವನೇಶ್ವರ ಕುಮಾರ್ 2-38)