ಶೀಘ್ರದಲ್ಲಿಯೇ ಗೃಹಲಕ್ಷ್ಮೀ 24ನೇ ಕಂತಿನ ಹಣ ಬಿಡುಗಡೆ : ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ : ರಾಜ್ಯದ ಗೃಹಲಕ್ಷ್ಮೀ ಯೋಜನೆಯಡಿ 24ನೆ ಕಂತಿನ ಹಣವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರದಿಂದ ಹಣ ಬಿಡುಗಡೆಯ ಪ್ರಕ್ರಿಯೆಗಳು ಆರಂಭವಾಗಲಿವೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಹಣ ಬ್ಯಾಂಕ್ ಖಾತೆಗಳಿಗೆ ಜಮೆ ಆಗಲಿವೆ ಭರವಸೆ ನೀಡಿದರು.
ಮೃತಪಟ್ಟವರ ಖಾತೆಗಳಿಗೂ ಗೃಹಲಕ್ಷ್ಮೀಯ ಹಣ ರವಾನೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಸಿದ ಅವರು, ಒಂದು ಕಂತು ಆ ರೀತಿ ಪಾವತಿಯಾಗಿರುವ ಮಾಹಿತಿ ಇದೆ. ಅದನ್ನು ತಡೆಯಲು ಈಗಾಗಲೇ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಎರಡು ಸಭೆಗಳನ್ನು ನಡೆಸಲಾಗಿದೆ. ವಿಶೇಷವಾದ ಸಾಫ್ಟ್ ವೇರ್ ಬಳಸಿ ಮುಂದೆ ಮೃತಪಟ್ಟವರ ಖಾತೆಗಳಿಗೆ ಹಣ ಸಂದಾಯವಾಗದಂತೆ ತಡೆಯಲಾಗುವುದು ಎಂದು ಅವರು ಹೇಳಿದರು.
ಬಾಗಲಕೋಟೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಬುದ್ಧಿಮಾಂದ್ಯ ಶಾಲೆಯನ್ನು ನಡೆಸಲಾಗುತ್ತಿದೆ. ಈ ಘಟನೆಯಿಂದ ಸರಕಾರಕ್ಕೂ ಮುಜುಗರವಾಗುತ್ತಿದ್ದು, ಅಧಿಕಾರಿಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದೆ. ಪೊಲೀಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಸಂಸ್ಥೆಯನ್ನು ಮುಚ್ಚಿಸಲಾಗುವುದು. ಅಲ್ಲಿರುವ ಮಕ್ಕಳನ್ನು ಸರಕಾರದ ಅನುದಾನಿತ ಶಾಲೆಗಳು ಮತ್ತು ಇತರ ಪಾಲನಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದರು.