ರಾಹುಲ್ ಗಾಂಧಿಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಪತ್ರ; ತನ್ನ ಹೇಳಿಕೆ ತಿರುಚಿ ವರದಿ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ
ಕೆ.ಎನ್.ರಾಜಣ್ಣ
ಬೆಂಗಳೂರು: ಮತಗಳ್ಳತನ ಕುರಿತ ತಮ್ಮ ಹೇಳಿಕೆಯನ್ನು ತಿರುಚಿ ತಪ್ಪಾದ ಅರ್ಥದಲ್ಲಿ ನಿಮಗೆ ವರದಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಬರೆದಿರುವ ಅವರು, ನನ್ನನ್ನು ಸಂಪುಟದಿಂದ ವಜಾ ಮಾಡಿರುವ ಸಂಬಂಧ ನಾನು ಕೆಲ ಸತ್ಯಾಂಶಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಮತಗಳ್ಳತನ ಅಭಿಯಾನಕ್ಕೆ ನಾನು ಮನಸಾರೆ ಬೆಂಬಲ ವ್ಯಕ್ತಪಡಿಸಿದ್ದೆ. ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ನಾನೂ ಪಾಲ್ಗೊಂಡು ನನ್ನ ಸಂಪೂರ್ಣ ಬೆಂಬಲ ಸೂಚಿಸಿದ್ದೆ. ಈ ವಿಚಾರವಾಗಿ ನಿಮ್ಮ ಹೋರಾಟವನ್ನು ಹಾಗೂ ನಿಮ್ಮ ನಾಯಕತ್ವವನ್ನು ನಾನು ಬೆಂಬಲ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಮತಗಳ್ಳತನದ ಬಗ್ಗೆ ನೀಡಿದ ಹೇಳಿಕೆಯಲ್ಲಿ ಕೆಪಿಸಿಸಿ ನಿಯೋಜಿಸಿದ್ದ ಬಿಎಲ್‍ಎಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ಬಗ್ಗೆ ಒತ್ತಿ ಹೇಳುವುದಾಗಿತ್ತು. ಒಂದು ವೇಳೆ ನಮ್ಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಬಂಧಿತ ಅಧಿಕಾರಿಗಳು ಈ ಮತಪಟ್ಟಿ ಲೋಪದೋಷಗಳ ಬಗ್ಗೆ ಸರಿಯಾಗಿ ಗಮನ ಹರಿಸಿದ್ದರೆ, ಈ ಮತಗಳ್ಳತನವನ್ನು ತಪ್ಪಿಸಬಹುದಿತ್ತು. ಆ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ 8-10 ಕ್ಷೇತ್ರಗಳನ್ನು ಹೆಚ್ಚಿಗೆ ಗೆಲ್ಲಬಹುದಿತ್ತು ಎಂದು ವಿವರಿಸಿದ್ದಾರೆ.
ಇತರ ರಾಜ್ಯಗಳಲ್ಲಿ ಈ ರೀತಿಯ ಲೋಪಗಳನ್ನು ತಪ್ಪಿಸಬಹುದಿತ್ತು. ಆ ಮೂಲಕ 30-40 ಸ್ಥಾನಗಳನ್ನು ಹೆಚ್ಚಿಗೆ ಗೆಲ್ಲಬಹುದಿತ್ತು. ಆಗ ನರೇಂದ್ರ ಮೋದಿ ಪ್ರಧಾನಿಯಾಗುತ್ತಿರಲಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುತ್ತಿತ್ತು, ರಾಹುಲ್ ಗಾಂಧಿ ಪ್ರಧಾನಿಯಾಗುತ್ತಿದ್ದರು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ನಾನು ನೆಹರೂ ಕುಟುಂಬದ ನಿಷ್ಠಾವಂತ ಅಭಿಮಾನಿಯಾಗಿದ್ದೇನೆ. ಕರ್ನಾಟಕದಲ್ಲಿ ಇಂದಿರಾ ಗಾಂಧಿ ಮತ್ತು ದೇವರಾಜ್ ಅರಸು ಅವರ ನಾಯಕತ್ವದಲ್ಲಿ ಭೂ ಸುಧಾರಣೆಯ ಐತಿಹಾಸಿಕ ಕಾಯ್ದೆಯನ್ನು ಅನುಷ್ಠಾನ ಮಾಡಲಾಗಿತ್ತು. ಆ ವೇಳೆ ನಾನು ಭೂ ನ್ಯಾಯಾಧೀಕರಣದ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ್ದೆ. ಇತ್ತೀಚಿನ ದಿನಗಳಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ 2013 ಮತ್ತು 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಸಿದ್ದರಾಮಯ್ಯ ಅವರು ದಣಿವರಿಯದೇ ಬಡವರು, ದುರ್ಬಲರು, ಒಬಿಸಿ, ಅಲ್ಪಸಂಖ್ಯಾತ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಮತಗಳ್ಳತನ ಸಂಬಂಧ ನನ್ನ ಹೇಳಿಕೆಯ ಸತ್ಯಾಂಶ ಹಾಗೂ ವಾಸ್ತವಾಂಶವನ್ನು ತಮ್ಮ ಮುಂದಿಡಲು ನಾನು ಈ ಪತ್ರವನ್ನು ಬರೆದಿದ್ದೇನೆ. ನನ್ನ ಹೇಳಿಕೆಯನ್ನು ತಿರುಚಿ, ಅದನ್ನು ತಪ್ಪಾಗಿ ನಿಮ್ಮ ಗಮನಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ತಮ್ಮಲ್ಲಿ ಮನವಿ ಮಾಡುತ್ತೇನೆ. ಈ ಬಗ್ಗೆ ಸವಿವರವಾಗಿ ಚರ್ಚಿಸುವ ಸಂಬಂಧ ತಮ್ಮ ಭೇಟಿಗೆ ನನಗೆ ಅವಕಾಶ ನೀಡುವಂತೆ ಕೋರುತ್ತೇನೆ ಎಂದು ಪತ್ರದಲ್ಲಿ ರಾಜಣ್ಣ ಮನವಿ ಮಾಡಿದ್ದಾರೆ.