ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಸೆಂಗಾರ್ ಗೆ ಜಾಮೀನು | ಇಂಡಿಯಾ ಗೇಟ್ ಬಳಿ ಸಂತ್ರಸ್ತೆ ಕುಟುಂಬದಿಂದ ಪ್ರತಿಭಟನೆ
ಪ್ರತಿಭಟನಾಕಾರರನ್ನು ಬಲಪ್ರಯೋಗಿಸಿ ವಶಕ್ಕೆ ಪಡೆದ ಪೊಲೀಸರು
ಹೊಸದಿಲ್ಲಿ: 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಗೆ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ ದಿಲ್ಲಿ ಹೈಕೋರ್ಟ್ ಆದೇಶವನ್ನು ವಿರೋಧಿಸಿ, ಸಂತ್ರಸ್ತೆ, ಆಕೆಯ ತಾಯಿ ಮತ್ತು ಮಹಿಳಾ ಕಾರ್ಯಕರ್ತೆ ಯೋಗಿತಾ ಭಯನಾ ಮಂಗಳವಾರ ಇಂಡಿಯಾ ಗೇಟ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ದಿಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಲಪ್ರಯೋಗಿಸಿ ವಶಕ್ಕೆ ಪಡೆದರು.
ದಿಲ್ಲಿ ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆ ವೇಳೆ ಮಾತನಾಡಿದ ಸಂತ್ರಸ್ತೆ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿಯೇ ಸೆಂಗಾರ್ ಗೆ ಜಾಮೀನು ನೀಡಲಾಗಿದೆ ಎಂದು ಆರೋಪಿಸಿದರು. ಅತ್ಯಾಚಾರ ಆರೋಪಿ ಹೊರಗಿರುವುದು ತಮ್ಮ ಹಾಗೂ ಕುಟುಂಬದ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಜಾಮೀನು ಆದೇಶವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತೆ ಯೋಗಿತಾ ಭಯನಾ, ಸಂತ್ರಸ್ತೆ ಕುಟುಂಬವು ಹಲವು ವರ್ಷಗಳಿಂದ ಭಯದಿಂದ ಬದುಕುತ್ತಿದೆ ಎಂದು ಹೇಳಿದರು. ಆರೋಪಿಗೆ ಜಾಮೀನು ದೊರೆತ ಬಳಿಕ ಕುಟುಂಬಕ್ಕೆ ಬೆದರಿಕೆ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಂತ್ರಸ್ತೆಯ ಸಹೋದರಿಯೂ ಜಾಮೀನು ಆದೇಶಕ್ಕೆ ವಿರೋಧ ವ್ಯಕ್ತಪಡಿಸಿ, ಸೆಂಗಾರ್ ಬಿಡುಗಡೆಗೊಂಡಿರುವುದರಿಂದ ತಮ್ಮ ಕುಟುಂಬದ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆಗೆ ಗುರಿಪಡಿಸಿತ್ತು. ಆ ತೀರ್ಪಿನ ಮೇಲ್ಮನವಿ ಬಾಕಿ ಇರುವ ಹಿನ್ನೆಲೆಯಲ್ಲಿ, ದೆಹಲಿ ಹೈಕೋರ್ಟ್ ವಿಭಾಗೀಯ ಪೀಠವು ಶಿಕ್ಷೆಯನ್ನು ಅಮಾನತುಗೊಳಿಸಿ 15 ಲಕ್ಷ ರೂಪಾಯಿ ಜಾಮೀನು ಬಾಂಡ್ ಷರತ್ತಿನೊಂದಿಗೆ ಜಾಮೀನು ನೀಡಿದೆ.
ಆದರೆ, ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಸೆಂಗಾರ್‌ಗೆ ಜಾಮೀನು ದೊರೆತಿಲ್ಲ. ಆ ಪ್ರಕರಣದಲ್ಲಿ ವಿಧಿಸಲಾದ 10 ವರ್ಷದ ಶಿಕ್ಷೆಯ ಹಿನ್ನೆಲೆಯಲ್ಲಿ ಸೆಂಗಾರ್ ಇನ್ನೂ ಕಸ್ಟಡಿಯಲ್ಲಿಯೇ ಇರುತ್ತಾನೆ.