ಹನೂರು ಶೂಟೌಟ್ ಪ್ರಕರಣ; ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ : ಪಿಯುಸಿಎಲ್ ಆಗ್ರಹ
ಪ್ರಥಮ ಹಂತದ ತನಿಖಾ ವರದಿ ಬಿಡುಗಡೆ
ಚಾಮರಾಜನಗರ : ಹನೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಸರಕಾರಿ ಅಧಿಕಾರಿಯ ನೇತೃತ್ವದಲ್ಲಿ ನಡೆಯುವ ತನಿಖೆಯು ಈ ಹತ್ಯೆ ಘಟನೆಯನ್ನು ಮುಚ್ಚಿ ಹಾಕುವ ಉದ್ದೇಶ ಹೊಂದಿದೆ. ಈ ಕಾರಣಕ್ಕಾಗಿ ಪ್ರಕರಣವು ಹೈಕೋರ್ಟ್‌ನ ಹಾಲಿ ಇಲ್ಲವೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಪಿಯುಸಿಎಲ್ ಜಿಲ್ಲಾ ಘಟಕ ಒತ್ತಾಯಿಸಿದೆ.
ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್‌ನಲ್ಲಿ ನಡೆದಿರುವ ಶೂಟೌಟ್ ಪ್ರಕರಣದ ನೈಜತೆ ಅರಿಯಲು ಪಿಯುಸಿಎಲ್ ಜಿಲ್ಲಾ ಘಟಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಥಮ ಹಂತದ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 9 ಪ್ರಶ್ನೆ ಹಾಗೂ 5 ಆಗ್ರಹಗಳನ್ನು ಒಳಗೊಂಡಿದೆ.
ಪಿಯುಸಿಎಲ್‌ನ ಆಗ್ರಹಗಳು
1. ಕರ್ನಾಟಕ ಸರಕಾರವು ಈ ಪ್ರಾಂತ್ಯದ ಬರ ಪರಿಸ್ಥಿತಿ ನಿವಾರಿಸಲು, ಜಾನುವಾರುಗಳಿಗೆ ನೀರು ಮೇವು ಒದಗಿಸಲು ತುರ್ತುಕ್ರಮ ವಹಿಸಬೇಕು. ಅಂತೆಯೇ ಅರಣ್ಯ ಸಂರಕ್ಷಣೆ ಹಾಗೂ ಜನಜೀವನದ ನಡುವೆ ಸಂಘರ್ಷವಾಗದಂತೆ ರಚನಾತ್ಮಕ ಪರಿಹಾರ ಕ್ರಮಗಳತ್ತ ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕು.
2. ಅರಣ್ಯಇಲಾಖೆಯ ಕ್ಯಾಚ್ ಆಂಡ್ ಕಿಲ್ ಎಂಬ ಅತಿರೇಕದ ಧೋರಣೆಯ ಬದಲಾಗಿ ಕಾನೂನಿನ ಇತರ ಮಾರ್ಗಗಳನ್ನು ಮೊದಲ ಆದ್ಯತೆಯಾಗಿ ಚಲಾಯಿಸಬೇಕು. ಹಣ ಪರಿಹಾರ ನೀಡುವುದು ನ್ಯಾಯದಾನವಲ್ಲ ಎಂಬುದು ಸಮಿತಿಯ ಅಭಿಪ್ರಾಯ.
3. ಮೃತ ರೈತರಾದ ಅಂತೋಣಿ ಸ್ವಾಮಿ, ಪೀಟರ್ ಹಾಗೂ ಕುಮಾರ್ ಅವರ ಫೋನ್ ಕರೆಗಳನ್ನು ಪರಿಶೀಲಿಸುವ ಮೂಲಕ ಅವರ ನಿತ್ಯ ಚಟುವಟಿಕೆಗಳು, ಕಳ್ಳ ಬೇಟೆಯಲ್ಲಿ ತೊಡಗಿದ್ದಲ್ಲಿ ಆ ಜಾಲದ ಪುರಾವೆಗಳನ್ನು ಸಂಗ್ರಹಿಸಲು ಅವಕಾಶವಿದೆ. ಪೊಲೀಸರ ತನಿಖೆಯು ಈ ಅಂಶವನ್ನು ಒಳಗೊಳ್ಳಬೇಕು.
4. ಘಟನೆಯ ಸತ್ಯಾಸತ್ಯತೆಯನ್ನು ಪರಾಮರ್ಶಿಸಲು ಮೃತರಕುಟುಂಬದವರಿಗೆ, ಮಾನವ ಹಕ್ಕು ಸಂಘಟನೆಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಎನ್‌ಕೌಂಟರ್ ನಡೆದ ಸ್ಥಳ ಪರಿಶೀಲನೆಗೆ ಅವಕಾಶ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಪಿಯುಸಿಎಲ್ ಚಾಮರಾಜನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.