ಚಾಮರಾಜನಗರ, : ಅರಣ್ಯ ಇಲಾಖೆಯವರ ಗುಂಡಿಗೆ ಮೂವರು ಮೃತಪಟ್ಟ ಘಟನೆ ನಡೆದು ತಿಂಗಳಾಗಿಲ್ಲ, ಇದರ ನಡುವೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿಧಾಮದಲ್ಲಿ ಕಳ್ಳ ಬೇಟೆ ಸಕ್ರಿಯವಾಗಿರುವುದು ಕಂಡು ಬಂದಿದ್ದು, ಹನೂರು ತಾಲೂಕಿನ ಉಡುದೊರೆಹಳ್ಳ ಜಲಾಶಯದ ಬಳಿ ಕಳ್ಳ ಬೆೇಟೆಗಾರರು ಕಡವೆಯೊಂದನ್ನು ಬೇಟೆಯಾಡಿ ಮಾಂಸ ಸಾಗಣೆ ಮಾಡುತ್ತಿರುವುದು ವರದಿಯಾಗಿದೆ.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಹನೂರು ಬಫರ್‌ವಲಯದ ಉಡುತೊರೆ ಹಳ್ಳ ಜಲಾಶಯದ ಗೇಟ್ ಬಳಿ ನಾಲ್ವರು ಅಪರಿಚಿತರು ಬಂದೂಕಿನ ಸಮೇತ ದೊಡ್ಡ ಚೀಲವನ್ನು ತಲೆಯ ಮೇಲೆ ಇಟ್ಟುಕೊಂಡು ರಾತ್ರಿ ವೇಳೆ ಸಂಚಾರ ಮಾಡುತ್ತಿದ್ದಾಗ, ಎದುರಿಗೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಯವರನ್ನು ಕಂಡು ಚೀಲವನ್ನು ಬೀಸಾಡಿ ಕತ್ತಲಲ್ಲಿ ಪರಾರಿಯಾದರು.

ಅರಣ್ಯ ಇಲಾಖೆಯವರು ಅಪರಿಚಿತರು ಬೀಸಾಡಿದ ಚೀವನ್ನು ಪರಿಶೀಲಿಸಿದಾಗ ಕಡವೆಯನ್ನು ಬಂದೂಕಿನಿಂದ ಗುಂಡುಹಾರಿಸಿ ಕೊಂದು ಅದನ್ನು ಮೂರು ಭಾಗಗಳಾಗಿ ವಿಂಗಡಿಸಿ ಚೀಲದಲ್ಲಿ ತುಂಬಿರುವುದು ಕಂಡು ಬಂತು.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಶ್ವಾನದಳದೊಂದಿಗೆ ಕಾಡಿನಲ್ಲಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ.  ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್ ಶ್ರೀಕಾಂತ್ ಹೊಸೂರು ಅವರ ಮಾರ್ಗದರ್ಶನದಂತೆ ವಲಯ ಅರಣ್ಯಾಧಿಕಾರಿ ಮಹೇಶ ಎಚ್.ಎನ್. ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ನಂದೀಶ್ ಎಸ್.ಬಿ ಮತ್ತು ಇತರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor