ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಬಸಪ್ಪನದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ಗುಡ್ಡದ ತಪ್ಪಲಿನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.

ತಮಿಳುನಾಡು, ಬಿಹಾರ ಹಾಗೂ ಆಂಧ್ರಪ್ರದೇಶ ಮೂಲದ ಸುಮಾರು 22 ಬಡ ಮತ್ತು ಅಂಗವಿಕಲ ಜನರನ್ನು ಕಳೆದ ಒಂದು ವರ್ಷದಿಂದ ಕೂಲಿ ಕೆಲಸಕ್ಕ ಕರೆತಂದು ಚಿತ್ರಹಿಂಸೆ ನೀಡುತ್ತಾ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

"ಷಣ್ಮುಗಂ ಎಂಬಾತ ತಮಿಳುನಾಡಿನ ವಿವಿಧ ರೈಲ್ವೆ ಸ್ಟೇಷನ್‌ಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದ, ಕೈ-ಕಾಲು ಇಲ್ಲದ ಅಂಗವಿಕಲರು, ಅನಾಥರು ಮತ್ತು ನಿರ್ಗತಿಕರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಇಲ್ಲಿಗೆ ಕರೆತಂದಿದ್ದಾನೆ" ಎನ್ನಲಾಗುತ್ತಿದೆ.

ತಮಿಳುನಾಡಿನವರಷ್ಟೇ ಅಲ್ಲದೆ, ಬಿಹಾರ ಮತ್ತು ಆಂಧ್ರಪ್ರದೇಶ ಮೂಲದ ಕೆಲಸಗಾರರೂ ಸೇರಿದಂತೆ ಒಟ್ಟು 22 ಜನರು ಷಣ್ಮುಗಂನ ನಿಯಂತ್ರಣದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ʼಕಳೆದ ಒಂದು ವರ್ಷದಿಂದ ಈ ಸಂತ್ರಸ್ತರಿಗೆ ಯಾವುದೇ ರೀತಿಯ ಸಂಬಳ ನೀಡದೆ, ಸರಿಯಾಗಿ ಊಟ ಮತ್ತು ಕುಡಿಯಲು ನೀರು ಕೊಡದೆ ದಿನವಿಡೀ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆʼ ಎಂಬ ಆರೋಪ ಕೇಳಿ ಬಂದಿದೆ.

ʼಕೂಲಿಯಾಳುಗಳು ಪ್ರತಿಭಟಿಸಿದರೆ ದೌರ್ಜನ್ಯ ಎಸಗಲಾಗುತ್ತಿದೆʼ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಕಬ್ಬಿನಗದ್ದೆಯಲ್ಲಿರುವ 22 ಅಮಾಯಕರನ್ನು ತಕ್ಷಣವೇ ರಕ್ಷಿಸಿ, ಅವರಿಗೆ ಸೂಕ್ತ ಆಹಾರ ಮತ್ತು ವೈದ್ಯಕೀಯ ನೆರವು ನೀಡಬೇಕು ಹಾಗೂ ಮುಖ್ಯ ಆರೋಪಿ ಷಣ್ಮುಗಂ ಮೇಸ್ಟ್ರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಈ ಮದ್ಯೆ ಮಾಹಿತಿ ತಿಳಿಯುತ್ತಿದ್ದಂತೆ ರೈತ ಸಂಘದ ಮುಖಂಡರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂತ್ರಸ್ತರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ರಾಮಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಪ್ರಸಾದ್ ರವರು ಸಿಬ್ಬಂದಿಗಳ ಸಹಿತ ಆಗಮಿಸಿ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

"ಕೂಲಿ ಕೆಲಸ ಮಾಡಿಸಿಕೊಂಡು ನಮಗೆ ಸರಿಯಾಗಿ ಕೂಲಿ ಹಣವಾಗಲೀ ಆಹಾರವಾಗಲೀ ನೀಡದೇ ಹಿಂಸೆ ನೀಡುತ್ತಿದ್ದಾರೆ. ಇಲ್ಲಿ ಕೈ ಕಾಲು ನೋವಿಂದ ನರಳುವ ರೋಗಿಗಳು ಇದ್ದಾರೆ. ಅವರಿಗೂ ಸಹ ಹಿಂಸೆ ನೀಡಲಾಗುತ್ತಿದೆ"

ಸಂತ್ರಸ್ತ ವ್ಯಕ್ತಿ

"ಷಣ್ಮುಗಂ ಎಂಬ ವ್ಯಕ್ತಿ, ರೈಲ್ವೆ ನಿಲ್ದಾಣ ಮತ್ತಿತರ ಕಡೆ ಇರುವ ನಿರ್ಗತಿಕರನ್ನು ಕೂಲಿ ಕೆಲಸ ಕೊಡಿಸುವುದಾಗಿ ಚಾಮರಾಜನಗರ ಜಿಲ್ಲೆಯ ಸೂಳೇರಿಪಾಳ್ಯದ ಮಹೇಶ್ ಎಂಬುವವರ ಕಬ್ಬಿನ ಗದ್ದೆಗೆ ಕೆಲಸಕ್ಕೆ ಕರೆತಂದಿದ್ದರು. ಇಲ್ಲಿ ಕೂಲಿ ಕೆಲಸ ಮಾಡುವವರಿಗೆ ಸರಿಯಾಗಿ ಊಟ, ವಸತಿ ನೀಡುತ್ತಿರಲಿಲ್ಲ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದು, ಸಮಸ್ಯೆ ಬಗೆಹರಿಸಲು ಮುಂದಾಗುತ್ತಿದ್ದೇವೆ"

ಅಂಜಾದ್ ಖಾನ್, ರೈತ ಮುಖಂಡರು, ಹನೂರು ತಾಲ್ಲೂಕು

"ಸೂಳೇರಿಪಾಳ್ಯ ಗ್ರಾಮದ ಸಮೀಪದ ಕಬ್ಬಿನಗದ್ದೆಯಲ್ಲಿ ನಿರ್ಗತಿಕರನ್ನು ಕರೆತಂದು ಕೂಲಿ ಕೆಲಸ ಮಾಡಿಸಿ ಕೂಲಿ ಹಾಗೂ ಅಹಾರ ನೀಡದೇ ಇರುವ ಬಗ್ಗೆ ಮಾಹಿತಿ ಬಂದ ಕೂಡಲೇ ಸಿಬ್ಬಂದಿಗಳೊಂದಿಗೆ ಬಂದು ಸ್ಥಳ ಪರಿಶೀಲಿಸಲಾಗುತ್ತಿದೆ. ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು"

ಮಂಜುನಾಥ್ ಪ್ರಸಾದ್, ಸಬ್ ಇನ್ಸ್‌ಪೆಕ್ಟರ್‌, ರಾಮಾಪುರ ಪೊಲೀಸ್ ಠಾಣೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾ.ಅಶ್ವಥ್ ಕುಮಾರ್

contributor