×
Ad

ಚಾಮರಾಜನಗರ | ಮತ್ತೊಂದು ಹುಲಿ ಹತ್ಯೆ: ಮಣ್ಣಿನಲ್ಲಿ ಹುದುಗಿಸಿದ ಸ್ಥಿತಿಯಲ್ಲಿ ಕಳೇಬರ ಪತ್ತೆ

Update: 2025-10-03 10:11 IST

ಚಾಮರಾಜನಗರ: ಐದು ಹುಲಿಗಳ ದಾರುಣ ಸಾವು ಪ್ರಕರಣ ಇನ್ನೂ ಜನಮನದಲ್ಲಿ ಮಾಸುವ ಮೊದಲೇ ಮತ್ತೊಂದು ಹುಲಿಯನ್ನು ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯ, ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಬಳಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಹನೂರು ವಲಯದ ಪಚ್ಚೆದೊಡ್ಡಿ ಗಸ್ತಿನಲ್ಲಿ ಮೃತಪಟ್ಟ ಹುಲಿಯೊಂದರ ಅರ್ಧ ಕಳೇಬರ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭಾರಿ ತಲೆನೋವುಂಟು ಮಾಡಿದೆ.

ಗಾಂಧಿ ಜಯಂತಿ ದಿನದಂದು ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಸತ್ತ ಹುಲಿಯ ಅರ್ಧ ಕಳೇಬರವೊಂದು ಮಣ್ಣಿನಲ್ಲಿ ಹುದುಗಿಸಿದ್ದು ಪತ್ತೆಯಾಗಿದೆ. ಹುಲಿಯ ತಲೆ, ಭುಜ ಮುಂದಿನ ಕಾಲುಗಳು ಪತ್ತೆಯಾಗಿದ್ದು ಉಳಿದ ಭಾಗಗಳು ಇನ್ನು ಪತ್ತೆಯಾಗಿಲ್ಲ. ಸಿಕ್ಕಿರುವ ಕಳೇಬರದ ಭಾಗದಲ್ಲಿ ಉಗುರುಗಳು ಮತ್ತು ಹಲ್ಲುಗಳು ಇದ್ದು, ಕಳೇಬರದ ಇನ್ನುಳಿದ ಭಾಗವನ್ನು ಹುಡುಕಲು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಕಳ್ಳ ಬೇಟೆಗಾರರು ಹುಲಿಯನ್ನು ಹತ್ಯೆ ಮಾಡಿರುವ ಬಗ್ಗೆ ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಇದನ್ನು ಕಳ್ಳ ಬೇಟೆಯ ಪ್ರಕರಣವೆಂದೇ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಸೀನ್ ಆಫ್ ಕ್ರೈಂ (SoCo), ಶ್ವಾನದಳ ಮತ್ತಿತರ ಸಹಾಯದಿಂದ ಅರಣ್ಯ ಇಲಾಖೆ ತಕ್ಷಣವೇ ತನಿಖೆ ಪ್ರಾರಂಭಿಸಿದ್ದು, ಪ್ರಕರಣಕ್ಕೆ ಸಂಬಂಧಿದಂತೆ ಆರೋಪಿ ಹಂತಕರನ್ನು ಆದಷ್ಟು ಬೇಗೆ ಪತ್ತೆ ಹಚ್ಚಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News