ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿಸುವುದಕ್ಕೆ ವಿರೋಧ: ರೈತರಿಂದ ಬೈಕ್ ರ‍್ಯಾಲಿ
ಚಾಮರಾಜನಗರ: ಹುಲಿಗಳ ಸರಣಿ ಸಾವಿಗೆ ಬೆಚ್ಚಿ ಬಿದ್ದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಮುಂದಾಗಿದೆ. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ರ‍್ಯಾಲಿ ನಡೆಸಿದರು.
ಹನೂರು ತಾಲೂಕಿನ ರಾಮಾಪುರದಿಂದ ನೂರಾರು ರೈತರು ಹುಲಿಯೊಂದರ ಪ್ರತಿಕೃತಿಯನ್ನು ಬೈಕಿನಲ್ಲಿಟ್ಟುಕೊಂಡು, "ಬೇಡವೇ ಬೇಡ, ಹುಲಿಧಾಮ ಬೇಡ" ಎಂದು ಘೋಷಣೆ ಕೂಗುತ್ತಾ ಹನೂರು, ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ ಮೂಲಕ ಚಾಮರಾಜನಗರದಲ್ಲಿರುವ ಜಿಲ್ಲಾಧಿಕಾರಿ ಕಾರ್ಯಾಲಯದತ್ತ ರ‍್ಯಾಲಿ ಮೂಲಕ ತೆರಳಿದರು.
ಪ್ರಸಕ್ತ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿಗಳ ಸರಣಿ ಹತ್ಯೆ ಹಾಗೂ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಗೆ ಸಂಬಂಧಿಸಿ ಅರಣ್ಯ ಇಲಾಖೆಯಿಂದ ಅಂತಿಮ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಈ ನಿಟ್ಟಿಲ್ಲಿ ಕಾರ್ಯನ್ಮುಖರಾಗಿರುವ ಅರಣ್ಯಾಧಿಕಾರಿಗಳು, ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಬೇಕಾಗುವ ವರದಿಯನ್ನು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ತಾಲೂಕು ಅಧ್ಯಕ್ಷ ಉಪಾಧ್ಯಕ್ಷ ಪಳನಿಸ್ವಾಮಿ, ತಾಲೂಕಿನ ರೈತ ಮುಖಂಡರಾದ ವೆಂಕಟೇಶ್ ನೇತೃತ್ವದಲ್ಲಿ ಇಂದು ಬೆಳಗ್ಗೆ ಪ್ರತಿಭಟನಾ ಬೈಕ್ ರ‍್ಯಾಲಿ ನಡೆಸಿದರು.