ಬಂಡೀಪುರ | ಪ್ರವಾಸಿಗನ ಮೇಲೆ ಕಾಡಾನೆ ದಾಳಿ: ಕಾಲಿನಡಿಗೆ ಸಿಲುಕಿಯೂ ಪಾರಾದ ಪ್ರವಾಸಿಗ
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆಕ್ಕನಹಳ್ಳ ರಸ್ತೆಯಲ್ಲಿ ಪ್ರವಾಸಿಗನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಆನೆಯ ಕಾಲಿನಡಿಗೆ ಸಿಲುಕಿದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗಾಯಾಳುವನ್ನು ಕೇರಳ ಮೂಲದ ಪ್ರವಾಸಿಗ ಎನ್ನಲಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.
ರವಿವಾರ ಬಂಡೀಪುರ ರಸ್ತೆಯಲ್ಲಿ ನಿಂತಿದ್ದ ಕಾಡಾನೆಯನ್ನು ವಾಹನಗಳಲ್ಲಿ ಆಗಮಿಸಿದ ಪ್ರವಾಸಿಗರು ವೀಕ್ಷಿಸುತ್ತಿದ್ದರು. ರಸ್ತೆಯಲ್ಲಿ ನಿಂತಿದ್ದ ಆನೆಯನ್ನು ನೋಡಿದ ಪ್ರವಾಸಿಗರು ವಾಹನಗಳಿಂದ ಇಳಿದು ಹತ್ತಿರದಲ್ಲೇ ವೀಕ್ಷಿಸುತ್ತಿದ್ದರು. ಈ ವೇಳೆ ಎದುರುಗಡೆಯಿದ್ದ ಪ್ರವಾಸಿಗನೊಬ್ಬನತ್ತ ಆನೆ ನುಗ್ಗಿದೆ. ಓಡಿದ ಪ್ರವಾಸಿಗನನ್ನು ಅಟ್ಟಾಡಿಸಿದ. ಈ ವೇಳೆ ರಸ್ತೆಯಲ್ಲಿ ಎಡವಿ ಬಿದ್ದ ಆತನನ್ನು ತುಳಿಯಲು ಯತ್ನಿಸಿದೆ. ಆದರೆ ಪ್ರವಾಸಿಗ ಗಾಯಗಳೊಂದಿಗೆ ಪಾರಾಗಿದ್ದಾನೆ.
ಗಾಯಾಳುವನ್ನು ಜೊತೆಗೆ ಬಂದಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆನೆ ದಾಳಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.